ನವದೆಹಲಿ: ರಷ್ಯಾ ಕೊರೋನಾ ಲಸಿಕೆ ಬಿಡುಗಡೆ ಬೆನ್ನಲ್ಲೇ ಇತ್ತ ಭಾರತದಲ್ಲಿ ಅಭಿವೃದ್ಧಿಯಾಗುತ್ತಿರುವ ಕೊರೋನಾ ಲಸಿಕೆ ಮಹತ್ವದ ಮುನ್ನಡೆ ಸಾಧಿಸಿದೆ.
ಭಾರತದ 12 ವೈದ್ಯಕೀಯ ಸಂಸ್ಥೆಗಳಲ್ಲಿ ದೇಶೀಯ ಕೊರೋನಾ ಲಸಿಕೆ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಮೊದಲ ಹಂತದ ಪರೀಕ್ಷೆಯ ಆರಂಭಿಕ ಫಲಿತಾಂಶಗಳಲ್ಲಿ ಮಾನವರ ಬಳಕೆಗೆ ಸುರಕ್ಷಿತ ಎಂಬುದನ್ನು ತಿಳಿಸಿವೆ. ರೋಹ್ಟಕ್ ನ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್ನ ಮುಖ್ಯ ಸಂಶೋಧನಾಧಿಕಾರಿಯಾಗಿರುವ ಡಾ. ಸವಿತಾ ವರ್ಮಾ, ಸಂಸ್ಥೆಯಿಂದ ಪ್ರಾಯೋಗಿಕವಾಗಿ ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಲಸಿಕೆ ಮಾನವರ ಬಳಕೆಗೆ ಸುರಕ್ಷಿತ ಎಂಬುದನ್ನು ಇದು ತಿಳಿಸುತ್ತದೆ ಎಂದು ಹೇಳಿದ್ದಾರೆ.
ಪ್ರಯೋಗಾರ್ಥಿಗಳಿಗೆ ಎರಡನೇ ಹಂತದ ಡೋಸ್ ನೀಡಲಾಗುತ್ತಿದ್ದು, ಅವರ ದೇಹದಲ್ಲಿ ಉಂಟಾಗಿರಬಹುದಾದ ಪ್ರತಿರೋಧಕ ಶಕ್ತಿಯ ವಿವರವನ್ನು ತಿಳಿಯಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ವರೆಗಿನ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತ ಎಂಬುದು ಗೊತ್ತಾಗಿದೆ. ಮುಂದಿನ ಹಂತದ ಪರೀಕ್ಷೆಗಳಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿಯಬೇಕಿದೆ. ಇದಕ್ಕಾಗಿ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ವೈದ್ಯೆ ಸವಿತಾ ಅವರು ವಿವರಿಸಿದ್ದಾರೆ.
ಮೊದಲ ಹಂತದ ಪ್ರಯೋಗದಲ್ಲಿ ಒಟ್ಟು 375 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು, ಎರಡನೇ ಹಂತದ ಪರೀಕ್ಷೆಯಲ್ಲಿ 1000ಕ್ಕೂ ಅಧಿಕ ಜನರ ಮೇಲೆ ಕ್ಲಿನಿಕಲ್ ಟ್ರಯಲ್ ನಡಸಲು ಉದ್ದೇಶಿಸಲಾಗಿದೆ. ಈ ಪರೀಕ್ಷೆ ಸೆಪ್ಟಂಬರ್ ಶುರು ಆಗುವ ನಿರೀಕ್ಷೆ ಹೊಂದಲಾಗಿದೆ. ಪರೀಕ್ಷೆ ನಡೆಸಲಾಗುತ್ತಿರುವ 12 ಸಂಸ್ಥೆಗಳಲ್ಲಿ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯೂ ಸೇರಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಈ ಕಾರ್ಯಕ್ಕೆ ಸಾಥ್ ನೀಡಿವೆ. ಮುಂದಿನ ತಿಂಗಳು ಇದರ ಎರಡನೇ ಹಂತದ ಪರೀಕ್ಷೆ ನಡೆಸಲಿವೆ.