ಕಾಸರಗೋಡು: ಬಂಗಾಳದ ಆಳಸಮುದ್ರದಲ್ಲಿ ವಾಯುಭಾರ ತಲೆದೋರಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲಡೆ ಬಿರುಸಿನ ಗಾಳಿಮಳೆ ತಲೆದೋರುತ್ತಿದೆ. ಇದರಿಂದ ವ್ಯಾಪಕವಾಗಿ ವಿದ್ಯುತ್ ಸಂಪರ್ಕ ಕಡಿದುಹೋಗುತ್ತಿದೆ. ಕೋವಿಡ್ ಪ್ರತಿರೋಧ ಸಂಹಿತೆಯನ್ನು ಪಾಲಿಸುತ್ತಾ ಕೆ.ಎಸ್.ಇ.ಬಿಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಸಂಬಂಧ ದುರಸ್ತಿ ಕಾಯಕಗಳಿಗೆ ಅಹೋರಾತ್ರಿ ದುಡಿಮೆ ನಡೆಸುತ್ತಿದ್ದಾರೆ. ವಿದ್ಯುತ್ ವ್ಯತ್ಯಯ ತಲೆದೋರುವ ವೇಳೆ ಒಂದಿಡೀ ಪ್ರದೇಶದ ಸಮಸ್ಯೆಗೆ ಪರಿಹಾರ ಒದಗಿಸುವ 11 ಕೆ.ವಿ.ಲೈನ್ ಗಳ ದುರಸ್ತಿಗೆ ಸಿಬ್ಬಂದಿ ಆದ್ಯತೆ ನೀಡುತ್ತಿದ್ದಾರೆ. ನಂತರ ಸ್ಥಳೀಯ ಮಟ್ಟದ, ಮನೆಗಳ ವಿದ್ಯುತ್ ಸಂಪರ್ಕ ಸಂಬಂಧ ಸಮಸ್ಯೆಗಳ ಪರಿಹಾರ(ಎಲ್.ಟಿ.ಲೈನ್ ಗಳ ದುರಸ್ತಿ) ನಡೆಸುತ್ತಾರೆ. ತದನಂತರವಷ್ಟೇ ವ್ಯಕ್ತಿಗತ ದೂರುಗಳ ಪರಿಶೀಲನೆ ನಡೆಸುತ್ತಾರೆ. ಇದನ್ನು ಅರ್ಥಮಾಡಿಕೊಂಡು ಸಹೃದಯ ಗ್ರಾಹಕರು ಸಹಕರಿಸುವಂತೆ ವಿದ್ಯುತ್ ಇಲಾಖೆ ಮನವಿ ಮಾಡಿದೆ.