ಪತ್ತನಂತಿಟ್ಟು: ಸಿಂಹ ಮಾಸದ ಪೂಜೆಗಾಗಿ ವಿಶ್ವ ವಿಖ್ಯಾತ ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಿ ಭಾನುವಾರ ನಡೆ ತೆರೆಯಲ್ಪಟ್ಟಿತು. ತಂತ್ರಿ ಕಂಠಾರರ್ ರಾಜೀವರ್ ಅವರ ನೇತೃತ್ವದಲ್ಲಿ ಮೇಲ್ಶಾಂತಿ ಬ್ರಹ್ಮಶ್ರೀ ಎ.ಕೆ.ಸುಧೀರ್ ನಂಬೂದಿರಿ ಬಾಗಿಲು ತೆರೆದು ದೀಪ ಪ್ರಜ್ವಲನೆಗೈದರು.
ಈ ಸಂದರ್ಭ ದೇವಸ್ವಂ ಉದ್ಯೋಗಿಗಳು ಮತ್ತು ಸನ್ನಿಧಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಪೋಲೀಸರು ಮಾತ್ರ ಉಪಸ್ಥಿತರಿದ್ದರು. ವಿಶೇಷ ಯಾವ ಪೂಜಾದಿಗಳನ್ನೂ ನಡೆಸಲಾಗಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಶ್ರೀಕ್ಷೇತ್ರದ ಬಾಗಿಲು ತೆರೆದಿರುವ ದಿನಗಳಲ್ಲಿ ವಾಡಿಕೆಯ ಪೂಜಾದಿಗಳು ಮಾತ್ರ ಇರಲಿದೆ. ವಿಧಿವಿಧಾನಗಳು ಪೂರ್ಣಗೊಂಡು ಆ.21 ರಂದು ಸಾಂಪ್ರದಾಯಿಕ ಹರಿವರಾಸರಂ ಹಾಡಿನೊಂದಿಗೆ ಮತ್ತೆ ಮುಚ್ಚಲ್ಪಡಲಿದೆ. ಓಣಂ ಪೂಜೆಗಳಿಗಾಗಿ ಆ.29 ರಂದು ಮರಳಿ ದೇವಾಲಯದ ಬಾಗಿಲು ತೆರೆಯಲ್ಪಡುವುದು.