ಕುಂಬಳೆ: ಕೇರಳ ವಿದ್ಯುತ್ ಶಕ್ತಿ ಪ್ರಸರಣ ಬೋರ್ಡ್(ಕೆಎಸ್‍ಇಬಿ) ಕುಂಬಳೆ ವಿಭಾಗೀಯ ವ್ಯಾಪ್ತಿಯ ಕೊಡೈಮ್ಮೆ-2ನೇ ವಿದ್ಯುತ್ ಪರಿವರ್ತಕ ವ್ಯಾಪ್ತಿಯ ಕೊಡ್ಯಮ್ಮೆ ಆಣೆಕಟ್ಟು ಮತ್ತು ಇರ್ನಿರಾಯರ ಮನೆಯ ಮಧ್ಯ ಭಾಗದ ಕಾಲು ದಾರಿಯಲ್ಲಿರುವ ಕಂಬ ಸಂಖ್ಯೆ ಕೆಡಿಎಂ-2/ಕೆ/ಬಿಪಿ/31/32/16 ರಲ್ಲಿ ಸರಬರಾಜಾಗುವ ತ್ರೀಪೇಸ್ ತಂತಿಗಳು ಭಾರೀ ಮಳೆಯ ಹಿನ್ನೆಲೆಯಲ್ಲಿ ಆಯತಪ್ಪಿ ನೇತಾಡುವ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಂತಿಗಳು ಮರಗಳ ಮಧ್ಯೆ ಕೈಗೆಟುಗುವ ಎತ್ತರದಲ್ಲಿ, ಯಾವಾಗಬೇಕಾದರೂ ಭೂಮಿಯನ್ನು ಸ್ಪರ್ಶಿಸುವ ತವಕದಲ್ಲಿತ್ತು.
ವಿದ್ಯುತ್ ತಂತಿಯ ಕೆಳಭಾಗದ ಗದ್ದೆಯಲ್ಲಿ ನೀರು ತುಂಬಿದ್ದು ಆ ದಾರಿಯಾಗಿ ಸಾಗುವ ಕೃಷಿಕರಾದ ಅನೇಕ ಮಂದಿಯನ್ನು ಆತಂಕಕ್ಕೀಡಾಗುದರೊಂದಿಗೆ ಮಹಾ ದುರಂತವನ್ನು ಆಹ್ವಾನಿಸುತ್ತಿತ್ತು.
ಸ್ಥಳೀಯ ವಾರ್ಡು ಸದಸ್ಯರು ಸಹಿತ ಸ್ಥಳೀಯ ನಾಗರಿಕರು ಹಲವಾರು ಬಾರಿ ವಿದ್ಯುತ್ ಕಚೇರಿಗೆ ದೂರು ನೀಡಿದ್ದು, ಇದೀಗ ಬುಧವಾರ ಅಧಿಕೃತರು ಆಗಮಿಸಿ ದುರಸ್ಥಿಗೊಳಿಸಿ ಅಪಾಯದಿಂದ ಪಾರುಮಾಡಿ ಮಾದರಿಯಾಗಿರುವರು.
ನೌಕರರ ಕೊರತೆಯಿಂದ ಒಂದಷ್ಟು ವಿಳಂಬಗೊಂಡಿರುವುದು ನಿಜ, ಆದರೆ ತೀವ್ರ ಅಪಾಯಗಳಿರುವಲ್ಲಿ ಮೊದಲ ಆದ್ಯತೆ ನೀಡಿ ದುರಸ್ಥಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಕುಂಬಳೆ ವಿಭಾಗ ಕೆಎಸ್‍ಇಬಿ ವಿಭಾಗೀಯ ಅಭಿಯಂತರ ವಿಜಯರಾಘವನ್ ತಿಳಿಸಿದ್ದಾರೆ.