ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದನ್ನು ವಿರೋಧಿಸಿ ರಾಜ್ಯದ 6 ಪಕ್ಷಗಳು ಒಟ್ಟಾಗಿದ್ದನ್ನು ಸ್ವಾಗತಿಸಿದ್ದ ಪಾಕಿಸ್ತಾನಕ್ಕೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಫಾರೂಖ್ ಅಬ್ದುಲ್ಲಾ, ನಾವು ಯಾರ ಕೈಗೊಂಬೆಯೂ ಅಲ್ಲ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಮುಖ್ಯವಾಹಿನಿ ರಾಜಕೀಯ ಪಕ್ಷಗಳನ್ನು ಪಾಕಿಸ್ತಾನ ಈವರೆಗೂ ನಿಂದಿಸುತ್ತಿತ್ತು. ಆದರೆ ಈಗ ಏಕಾಏಕಿ ಇಷ್ಟಪಡಲು ಪ್ರಾರಂಭಿಸಿದೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಇದೇ ವೇಳೆ ಕೇಳಲಾದ ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಗೆ ಸಂಬಂಧಿಸಿದ ಪ್ರತಿಕ್ರಿಯೆಗೆ ಉತ್ತರಿಸಿರುವ ಅವರು, "ನಾವು ಯಾರಿಗೂ ಸಹ ಕೈಗೊಂಬೆಗಳಲ್ಲ. ದೆಹಲಿಗೂ ಕೈಗೊಂಬೆಗಳಲ್ಲ. ಗಡಿಯಾಚೆಗೂ ನಾವು ಕೈಗೊಂಬೆಗಳಲ್ಲ. ನಾವು ಜಮ್ಮು-ಕಾಶ್ಮೀರದ ಜನತೆಗೆ ಮಾತ್ರ ಉತ್ತರದಾಯಿಗಳು. ಅವರ ಒಳಿತಿಗಾಗಿ ಮಾತ್ರ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್, ಎನ್ ಸಿ ಸೇರಿದಂತೆ ಒಟ್ಟು 6 ಪಕ್ಷಗಳು ಒಟ್ಟಾದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕ್ ವಿದೇಶಾಂಗ ಸಚಿವ ಖುರೇಷಿ, ಈ ಬೆಳವಣಗೆ ಸಾಧಾರಣವಾದುದ್ದಲ್ಲ, ಬದಲಾಗಿ ಮಹತ್ವದ್ದಾಗಿದೆ ಎಂದು ಹೇಳಿದ್ದರು.