ನವದೆಹಲಿ: ಬ್ಯಾಟರಿ ರಹಿತ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ನೋಂದಣಿಗೆ ಅವಕಾಶ ಕಲ್ಪಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇಂಥ ವಾಹನಗಳ ನೋಂದಣಿಗೆ ಅನುಮತಿ ನೀಡುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗೆ ಸೂಚಿಸಿದೆ.
ದ್ವಿಚಕ್ರ ಅಥವಾ ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಒಟ್ಟು ವೆಚ್ಚದ ಶೇಕಡ 30ರಿಂದ 40ರಷ್ಟು ವೆಚ್ಚವನ್ನು ಬ್ಯಾಟರಿಯೇ ಹೊಂದಿರುತ್ತದೆ. ಹೀಗಾಗಿ ಹೊಸ ಕ್ರಮವು ಹೆಚ್ಚು ಜನರಿಗೆ ಎಲೆಕ್ಟಿಕ್ ವಾಹನಗಳನ್ನು ಖರೀದಿಸಲು ಉತ್ತೇಜಿಸುತ್ತದೆ. ಜತೆಗೆ ಇದರಿಂದಾಗಿ ಜನರಿಗೆ ಕೈಗೆಟುಕುವ ದರದಲ್ಲಿ ಎಲೆಕ್ಟಿಕ್ ವಾಹನಗಳು ಲಭ್ಯವಾಗುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಎಲೆಕ್ಟಿಕ್ ವಾಹನಗಳ ಕಂಪನಿಗಳು ಅಥವಾ ಇಂಧನ ಸೇವಾ ಪೂರೈಕೆದಾರರು ಇಂಥ ಬ್ಯಾಟರಿ ರಹಿತ ವಾಹನಗಳಿಗೆ ಯಾವಾಗ ಬೇಕಾದರೂ ಬ್ಯಾಟರಿ ಮಾರಾಟ ಮಾಡಬಹುದು ಅಥವಾ ಬಾಡಿಗೆ ಆಧಾರದ ಮೇಲೆ ನೀಡಬಹುದಾಗಿದೆ.
ಬಿಎಸ್-4 ವಾಹನ ನೋಂದಣಿಗೆ ಅನುಮತಿ: ವಾಹನ ಮಾರಾಟಗಾರರು ಮತ್ತು ಗ್ರಾಹಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆಗೂ ಪೂರ್ವದಲ್ಲಿ ಮಾರಾಟವಾಗಿರುವ ಬಿಎಸ್- 4 ವಾಹನಗಳ ನೋಂದಣಿಗೆ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಗುರುವಾರ ತೆರವುಗೊಳಿಸಿದೆ.
ಲಾಕ್ಡೌನ್ ಘೊಷಣೆ ಬಳಿಕ ಮಾರಾಟವಾದ ಬಿಎಸ್-4 ವಾಹನಗಳ ನೋಂದಣಿಗೆ ಸಮ್ಮತಿಸಿಲ್ಲ. ಈ ಆದೇಶದ ಅನ್ವಯ ಇನ್ನೂ ಸುಮಾರು 39 ಸಾವಿರ ವಾಹನಗಳು ನೋಂದಣಿಗೆ ಅನರ್ಹವಾಗಿವೆ. ಆದರೆ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಲಾಕ್ಡೌನ್ ಜಾರಿಗೂ ಹಿಂದೆ ಮಾರಾಟವಾಗಿರುವ ಬಿಎಸ್-4 ವಾಹನಗಳ ನೋಂದಣಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಈ ವರ್ಷ ಮಾರ್ಚ್ 12ರಿಂದ 31ರವರೆಗೆ 11 ಲಕ್ಷಕ್ಕೂ ಹೆಚ್ಚು ಬಿಎಸ್-4 ವಾಹನಗಳು ಮಾರಾಟವಾಗಿವೆ. ಅದರಲ್ಲೂ ಮಾರ್ಚ್ 29ರಿಂದ 31ರ ನಡುವೆ 2.50 ಲಕ್ಷಕ್ಕೂ ಹೆಚ್ಚು ಬಿಎಸ್- 4 ವಾಹನಗಳು ಮಾರಾಟವಾಗಿವೆ ಎಂದು ತಿಳಿದುಬಂದಿದೆ. ಮಾರ್ಚ್ 24ರಿಂದ ಲಾಕ್ಡೌನ್ ಜಾರಿಗೆ ಬಂತು.