ತಿರುವನಂತಪುರಂ: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನಲ್ಲಿ ನಡೆದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್ ರವಾನಿಸುವಂತೆ ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುನ್ನಾರ್ ನ ರಾಜಮಾಲಾದ ಪೆಟ್ಟಿಮುಡಿ ಗುಡ್ಡ ಕುಸಿತವಾಗಿದ್ದು, ಘಟನೆಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿ ಹಲವರು ಗುಡ್ಡದ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಏತನ್ಮಧ್ಯೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ರಕ್ಷಣಾ ಕಾರ್ಯಾಚರಣೆ ವೇಗ ಹೆಚ್ಚಿಸುವಂತೆ ಸೂಚಿಸಿದ್ದು, ಪೊಲೀಸರು, ಅಗ್ನಿ ಶಾಮಕ ದಳ, ಅರಣ್ಯ ಸಿಬ್ಬಂದಿಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಮಳೆ ಮತ್ತು ಭೂ ಕುಸಿತ ಸಂಬಂಧ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚಿಸಿರುವ ವಿಜಯನ್ ಸಾಧ್ಯವಾದರೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗುವಂತೆ ಹೇಳಿದ್ದಾರೆ.
ಈಗಾಗಲೇ ಕೇರಳ ಆರೋಗ್ಯ ಇಲಾಖೆ ಮೊಬೈಲ್ ಮೆಡಿಕಲ್ ಯೂನಿಟ್ ಮತ್ತು ಸಿಬ್ಬಂದಿಗಳನ್ನು, 15 ಆ್ಯಂಬುಲೆನ್ಸ್ ಗಳನ್ನು ಭೂ ಕುಸಿತ ದುರಂತ ಪ್ರದೇಶಕ್ಕೆ ಸ್ಥಳಾಂತರಿಸಿದೆ. ಇದೇ ವೇಳೆ ಸಿಎಂ ವಿಜಯನ್ ರಕ್ಷಣಾ ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್ ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.