ತಿರುವನಂತಪುರ: ಕೋವಿಡ್ ರೋಗಿಗಳ ದೂರವಾಣಿ ಸಂಭಾಷಣೆಯನ್ನು ಪೆÇಲೀಸರು ಪತ್ತೆ ಹಚ್ಚುತ್ತಿದ್ದಾರೆ ಎಂಬ ವಿವಾದದ ಹಿನ್ನೆಲೆಯಲ್ಲಿ ವೈದ್ಯರು ಸಾಮಾಜಿಕ ಭದ್ರತಾ ಮಿಷನ್ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ. ಹಿರಿಯ ವೈದ್ಯರ ಆರೋಗ್ಯ ಮಾಹಿತಿಯೂ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ.
ವಯೋಮಿತ್ರ ಯೋಜನೆಯನ್ವಯ ತಮ್ಮ ಸೇವೆಯಿಂದ ನಿವೃತ್ತರಾದ 39 ಮಂದಿ ಹಿರಿಯ ವೈದ್ಯರ ಆರೋಗ್ಯ ವಿವರಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೇರಳ ಸಾಮಾಜಿಕ ಭದ್ರತಾ ಮಿಷನ್ ನಡೆಸುತ್ತಿರುವ ವಯೋಮಿತ್ರ ಯೋಜನೆಯನ್ವಯ ಕೋವಿಡ್ ಹಿನ್ನೆಲೆಯಲ್ಲಿ ಹಿರಿಯ ವೈದ್ಯರುಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು. ಅವರ ಆರೋಗ್ಯ ಸಮಸ್ಯೆಗಳ ಜೊತೆಗೆ ವೈದ್ಯರ ಹೆಸರನ್ನು ಬಿಡುಗಡೆ ಮಾಡಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕೇರಳ ಸಾಮಾಜಿಕ ಭದ್ರತಾ ಮಿಷನ್ (ಕೆಎಸ್‍ಎಸ್‍ಎಂ) ಹೊರಡಿಸಿದ ಆದೇಶದಲ್ಲಿ ಅವರು ಕೆಲಸ ಮಾಡುವ ಘಟಕದ ಜೊತೆಗೆ ವೈದ್ಯರ ವಯಸ್ಸು ಮತ್ತು ಅವರ ಕಾಯಿಲೆಗಳ ವಿವರಗಳನ್ನು ಬಯಲುಗೊಳಿಸಿದೆ. ಬಿಡುಗಡೆಯಾದ ಆದೇಶ ಮತ್ತು ಪಟ್ಟಿಯನ್ನು ಸಾಮಾಜಿಕ ಮಾಧ್ಯಮ ಸೇರಿದಂತೆ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಇರಲು ಸರ್ಕಾರ ಸೂಚಿಸುತ್ತಿದೆ ಎಂದು ಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತ್ರ ಯೋಜನೆಯಲ್ಲಿ ಕೆಲಸ ಮಾಡುವ ವೈದ್ಯರಿಗೂ ಈ ಶಿಫಾರಸು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೆಎಸ್‍ಎಸ್‍ಎಂ ಕಾರ್ಯನಿರ್ವಾಹಕ ನಿರ್ದೇಶಕ ಮೊಹಮ್ಮದ್ ಅಶೀಲ್ ಈ ಯೋಜನೆಯಿಂದ 39 ವೈದ್ಯರ ಸೇವೆಗಳನ್ನು ರದ್ದುಗೊಳಿಸಲು ಆದೇಶಿಸಿದ್ದಾರೆ.
ಆದೇಶದ ಜೊತೆಗೆ, ವೈದ್ಯರ ಹೆಸರುಗಳು, ಅವರು ಕೆಲಸ ಮಾಡುವ ವಯೋ ಮಿತ್ರ ಘಟಕ, ಅವರ ವಯಸ್ಸು, ಅವರ ಆರೋಗ್ಯ ಸಮಸ್ಯೆಗಳು, ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್, ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಗಳನ್ನೂ ದಾಖಲಿಸಲಾಗಿದೆ. ಕೆಲವು ವೈದ್ಯರು ಜುಲೈ 27 ರಂದು ವಾಟ್ಸಾಪ್ ಮೂಲಕ ಆದೇಶವನ್ನು ಪಡೆದರು. ಜುಲೈ 31 ರಿಂದ ವೈದ್ಯರ ಸೇವೆಯನ್ನು ಕೊನೆಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ಅಧಿಕೃತವಾಗಿ ನಮಗೆ ಯಾವುದೇ ನೋಟಿಸ್ ನೀಡಿಲ್ಲ ಮತ್ತು ನನಗೆ ವಾಟ್ಸಾಪ್ ಮೂಲಕ ಆದೇಶ ಸಿಕ್ಕಿತು. ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿರುವ ಪಟ್ಟಿಯಲ್ಲಿ ಅನೇಕ ವೈದ್ಯರಿದ್ದಾರೆ. ಇವೆಲ್ಲವೂ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡಿದರೆ, ಅದು ನಮ್ಮ ಗೌಪ್ಯತೆ ಮತ್ತು ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಪಟ್ಟಿಯಲ್ಲಿರುವ ವೈದ್ಯರೊಬ್ಬರು ತಿಳಿಸಿರುವರು.
ಭಾರತೀಯ ವೈದ್ಯಕೀಯ ಸಂಘವು ಆದೇಶ ಹೊರಡಿಸಿದ ರೀತಿಯನ್ನು ಟೀಕಿಸಿದೆ. ವೈದ್ಯರ ಆರೋಗ್ಯ ಮಾಹಿತಿಯನ್ನು ಬಹಿರಂಗಪಡಿಸುವುದು ಗೌಪ್ಯತೆಯ ಉಲ್ಲಂಘನೆಗಿಂತ ಹೆಚ್ಚೇನೂ ಅಲ್ಲ ಮತ್ತು ಇದು ಒಬ್ಬರ ಖಾಸಗಿಯಾಗಿ ಹಂಚಿದರೂ ಸಮರ್ಥನೀಯವಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. 'ವೈದ್ಯರ ಎಲ್ಲಾ ಗುಂಪುಗಳಲ್ಲಿ ಈ ಪಟ್ಟಿಯನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಐಎಂಎ ಈಗಾಗಲೇ ಹಲವಾರು ದೂರುಗಳನ್ನು ಸ್ವೀಕರಿಸಿದೆ ಎಂದು ಐಎಂಎ ರಾಜ್ಯ ಅಧ್ಯಕ್ಷ ಅಬ್ರಹಾಂ ವರ್ಗೀಸ್ ಹೇಳಿದ್ದಾರೆ.
ಆದರೆ ಇಂತಹ ಗೌಪ್ಯ ಸಂದೇಶಗಳು ಮಿಷನ್ ಅಧಿಕಾರಿಗಳಲ್ಲಿ ಮಾತ್ರ ಹರಡಿದೆ ಎಂದು ಕೆ.ಎಸ್.ಎಸ್.ಎಂ. ಪ್ರತಿಕ್ರಿಯಿಸಿದೆ. ಆರೋಗ್ಯ ಮಾಹಿತಿಯನ್ನು ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಸೇರಿಸಲಾಗಿದ್ದು, ಅದನ್ನು ಪ್ರಸಾರ ಮಾಡಬಾರದು ಎಂದು ಮಿಷನ್ ನಿರ್ದೇಶಕ ಆಶಿಲ್ ಸ್ಪಷ್ಟಪಡಿಸಿದರು.