ಭಾರತದಲ್ಲಿ ಮಾನವನ ಮೇಲೆ ಆಕ್ಸ್‌ಫರ್ಡ್ ಲಸಿಕೆ ಕೊವಿಶೀಲ್ಡ್(ಅಸ್ಟ್ರಾಜೆನೆಕಾ) ನ 2 ಹಾಗೂ 3ನೇ ಹಂತದ ಪ್ರಯೋಗ ನಡೆಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸಮ್ಮತಿ ನೀಡಿದೆ.
ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಸಬ್ಜಕ್ಟ್ ಎಕ್ಸ್ಪರ್ಟ್ ಕಮಿಟಿ ಸೂಚನೆ ಮೇರೆಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ 2 ಹಾಗೂ 3ನೇ ಹಂತದ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಅನುಮತಿ ದೊರೆತಿದೆ. ಹಾಗಾದರೆ ಯಾಕಾಗಿ ಇಷ್ಟೆಲ್ಲಾ ಲಸಿಕೆಗಳನ್ನು ಕಂಡುಹಿಡಿಯಲಾಗುತ್ತಿದೆ. ನಮಗೆ ಇಷ್ಟೆಲ್ಲಾ ಲಸಿಕೆಗಳ ಅಗತ್ಯವಿದೆಯೇ? ಒಂದೇ ಲಸಿಕೆ ಸಾಕಲ್ಲವೇ? ಯಾಕಾಗಿ ಇಷ್ಟೊಂದು ಹಣವನ್ನು ವಚ್ಚ ಮಾಡುತ್ತಿದ್ದಾರೆ. ಈ ಎಲ್ಲಾ ಲಸಿಕೆಗಳು ಎಲ್ಲರಿಗೂ ಲಭ್ಯವಾಗಲಿದೆಯೇ ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಸಂಭವನೀಯ ಉತ್ತರಗಳು ಇಲ್ಲಿವೆ.
ಲಸಿಕೆಯ ಯಶಸ್ಸಿನ ಪ್ರಮಾಣ ಕಡಿಮೆ ಇಷ್ಟೆಲ್ಲಾ ಲಸಿಕೆಗಳ ಸಂಶೋಧನೆ ನಡೆಯುತ್ತಿದ್ದರೂ, ಯಶಸ್ಸಿನ ಪ್ರಮಾಣ ಕಡಿಮೆ ಇರುತ್ತದೆ. ಸಾಕಷ್ಟು ಕಂಪನಿಗಳು ಸಲಿಕೆ ಸಂಶೋಧನೆಯಲ್ಲಿ ಮುಳುಗಿವೆ ಆದರೆ ಎಲ್ಲರಿಗೂ ಯಶಸ್ಸು ಸಿಗುವ ಸಾಧ್ಯತೆಗಳಿಲ್ಲ. ಅದನ್ನು ತಯಾರಿಸುವುದು ಅಷ್ಟು ಸುಲಭವಲ್ಲ. 100 ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದರೂ ಅದರಲ್ಲಿ 20 ಲಸಿಕೆಗಳು ಮಾತ್ರ ಕ್ಲಿನಿಕಲ್ ಟ್ರಯಲ್‌ಗೆ ಬರಲಿವೆ. ಶೇ.80ರಷ್ಟು ಲಸಿಕೆಗಳ ಪ್ರಯೋಗ ಪ್ರಾಣಿಗಳ ಮೇಲೆ ಮಾತ್ರ ನಡೆಯಲಿದೆ. ಕೇವಲ ಒಂದು ಅಥವಾ ಎರಡು ಲಸಿಕೆಗಳು ಮಾತ್ರ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
ಅಂತಿಮ ಹಂತದ ಪ್ರಯೋಗ ಯಶಸ್ವಿಯಾಗಲೇಬೇಕೆಂದೇನಿಲ್ಲ :
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಅಂತಿಮ ಹಂತದ ಪ್ರಯೋಗವನ್ನು ಮಾನವನ ಮೇಲೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಅಂತಿಮ ಟ್ರಯಲ್‌ನಲ್ಲಿ ಯಶಸ್ವಿಯಾಗುತ್ತದೆ ಎಂದು ಅರ್ಥವಲ್ಲ. ಅಂತಿಮ ಹಂತ ಕಷ್ಟದಾಯಕವಾಗಿರುತ್ತದೆ. ಪ್ರಯೋಗ ವಿಫಲಗೊಳ್ಳುವ ಸಾಧ್ಯತೆಯೂ ಇರುತ್ತದೆ.
ಅಂತಿಮವಾಗಿ ನೂರಾರು ಲಸಿಕೆಗಳು ಲಭ್ಯವಾಗುವುದಿಲ್ಲ:
ಅಂತಿಮವಾಗಿ ನೂರಾರು ಲಸಿಕೆಗಳು ಮಾರುಕಟ್ಟೆಗೆ ಬರುವುದಿಲ್ಲ, ನಾಲ್ಕೈದು ಲಸಿಕೆಗಳಿಗೆ ಮಾತ್ರ ಅನುಮತಿ ದೊರೆಯುತ್ತದೆ.
ನೂರಾರು ಲಸಿಕೆಗಳ ಅಗತ್ಯವಿದೆಯೇ? :
ನೂರಾರು ಲಸಿಕೆಗಳ ಅಗತ್ಯವಿದೆಯೇ? :
ಈಗಿರುವ ಪರಿಸ್ಥಿತಿಯಲ್ಲಿ ಯಾವುದಾದರೊಂದು ಕೊರೊನಾ ಲಸಿಕೆ ಬೇಗ ಸಿಕ್ಕಿದರೆ ಸಾಕಪ್ಪಾ ಎಂದನಿಸುತ್ತಿದೆ. ಈ ಎಲ್ಲಾ ಲಸಿಕೆಗಳು ಯಾಕಾಗಿ ಪ್ರಯೋಗಕ್ಕೆ ಒಳಪಡುತ್ತಿವೆ ಎಂದರೆ ಒಂದು ಲಸಿಕೆಯು ಪ್ರಯೋಗದಲ್ಲಿ ಯಶಸ್ವಿಯಾಗದಿದ್ದರೆ ಅದೇ ಸಂದರ್ಭದಲ್ಲಿ ಮತ್ತೊಂದು ಲಸಿಕೆಯನ್ನು ಪ್ರಯೋಗಿಸಬಹುದು ಎಂದು. ಅಂತ್ಯದಲ್ಲಿ ಯಾವುದಾದರೊಂದು ಲಸಿಕೆಯು ಸಹಾಯಕ್ಕೆ ಬರಲಿ ಎಂದು ನೂರಾರು ಲಸಿಕೆಗಳನ್ನು ಸಂಶೋಧಿಸಲಾಗುತ್ತಿದೆ. ಅಮೆರಿಕದಲ್ಲಿ ಈಗಾಗಲೇ ನೂರಾರು ಡಾಲರ್ ಹಣವನ್ನು ಲಸಿಕೆಯ ಮೇಲೆ ವೆಚ್ಚ ಮಾಡಲಾಗಿದೆ. ಈಜಿಪ್ಟ್, ಥೈಲೆಂಡ್, ನೈಜೀರಿಯಾ, ಅರ್ಜೆಂಟೀನಾದಲ್ಲೂ ಕೂಡ ಸಂಶೋಧನೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಮೊದಲು ಕಂಡು ಹಿಡಿದ ಲಸಿಕೆಗಳು ಹೆಚ್ಚು ಪ್ರಭಾವಿ ಎಂದು ಹೇಳಲು ಸಾಧ್ಯವಿಲ್ಲ. ಮೊದಲು ಮಾಡಿದ ತಪ್ಪನ್ನೆಲ್ಲಾ ಸರಿಪಡಿಸಿ ಬಂದಿರುವ ಲಸಿಕೆಗಳು ಕೂಡ ಹೆಚ್ಚು ಪ್ರಭಾವಿತವಾಗಿರುತ್ತವೆ.