ಮಧೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಕೇಂದ್ರದಲ್ಲಿ ನಡೆಯಲಿರುವ ಕ್ಷೇತ್ರ ನಿರ್ಮಾಣದ ಪೂರ್ವಭಾವಿಯಾಗಿ ಭಾರತದ ವಿವಿಧಡೆಗಳ ಪವಿತ್ರ ಕ್ಷೇತ್ರಗಳ ಮಣ್ಣು ಹಾಗೂ ಪವಿತ್ರ ಜಲವನ್ನು ಸೇರಿಸಲಾಗುತ್ತಿದ್ದು ಇದರ ಭಾಗವಾಗಿ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಮಧೂರು ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ಮಣ್ಣು-ಹಾಗೂ ಮಧುವಾಹಿನಿ ನದಿಯ ಜಲವನ್ನು ವಿಹಿಂಪ ನೇತಾರರಿಗೆ ಸೋಮವಾರ ಕೊಡಮಾಡಲಾಯಿತು.
ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರಸಿದ್ದವಾದ ಶ್ರೀ ಮಧೂರು ದೇಗುಲದ ಭೂಮಿಯ ಮಣ್ಣು ಹಾಗೂ ಮಧುವಾಹಿನಿ ನದಿಯ ತೀರ್ಥವನ್ನು ಕಾಸರಗೋಡು ವಿಶ್ವಹಿಂದೂ ಪರಿಷತ್ ಪ್ರಖಂಡದ ಅಧ್ಯಕ್ಷ ಹರೀಶ್ ಕುಮಾರ್ ಅಣಂಗೂರು ಹಾಗೂ ರವಿಚಂದ್ರ ಎಡನೀರು ಅವರು ವಿಶ್ವಹಿಂದೂ ಪರಿಷತಿನ ಕಾಸರಗೋಡು ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಅವರಿಗೆ ಹಸ್ತಾಂತರಿಸಿದರು.
ಇದನ್ನು ಪೇಜಾವರ ಮಠಾಧೀಶರ ಮೂಲಕ ಅಯೋಧ್ಯೆಯ ಶ್ರೀರಾಮ ಮಂದಿರದ ದಿವ್ಯ ಸನ್ನಿಧಿಗೆ ಸೇರಲು ಹಸ್ತಾಂತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಅಪ್ಪಯ್ಯ ನಾಯ್ಕ್ ಮಧೂರು, ಕೃಷ್ಣ ನಾಯ್ಕ್ ಮಧೂರು ಮೊದಲಾದವರು ಉಪಸ್ಥಿತರಿದ್ದರು.