ಕಾಸರಗೋಡು: ಪೈಪ್‍ಲೈನ್ ಮೂಲಕ ಅಡುಗೆ ಅನಿಲ ತಲುಪಿಸುವ ಕೊಚ್ಚಿ-ಮಂಗಳೂರು ಗೈಲ್ ಅನಿಲ ಪೈಪ್‍ಲೈನ್ ನಿರ್ಮಾಣ 3 ದಿನದೊಳಗೆ ಪೂರ್ತಿಯಾಗಲಿದೆ. 380 ಕಿಲೋ ಮೀಟರ್ ಲೈನ್‍ನಲ್ಲಿ ಉಳಿದಿರುವ ಚಂದ್ರಗಿರಿ ಹೊಳೆಯಲ್ಲಿ ಪೈಪ್ ಅಳವಡಿಸುವ ಕೆಲಸ ಅಂತಿಮ ಹಂತದಲ್ಲಿದೆ. ಬುಧವಾರದೊಳಗೆ ಕಾಮಗಾರಿ ಪೂರ್ತಿಯಾಗುವ ನಿರೀಕ್ಷೆ ಇರಿಸಲಾಗಿದೆ.
ಭೂಮಿ ವಶ ಸಂಬಂಧಿಸಿ ಈ ಮೊದಲು ಕೆಲವೆಡೆ ಉಂಟಾದ ಪ್ರತಿಭಟನೆಗಳನ್ನು ಮೆಟ್ಟಿನಿಂತು ಯೋಜನೆ ಜಾರಿಗೊಳ್ಳುತಿದೆ. 3226 ಕೋಟಿ ರೂ. ಈ ಯೋಜನೆಗೆ ವೆಚ್ಚ ಮಾಡಲಾಗಿದೆ. ಕೊಚ್ಚಿ-ಕುಟ್ಟನಾಡ್-ಬೆಂಗಳೂರು-ಮಂಗಳೂರು ಪೈಪ್‍ಲೈನ್ ಯೋಜನೆಯ ಅಂಗವಾಗಿ ಕೊಚ್ಚಿಯಿಂದ ಮಂಗಳೂರುವರೆಗೆ ಪೈಪ್‍ಲೈನ್ ಅಳವಡಿಸಲಾಗಿದೆ. ಇದರಲ್ಲಿ ಕೊಚ್ಚಿಯಿಂದ ಪಾಲ್ಘಾಟ್ ವರೆಗಿನ ಪೈಪ್‍ಲೈನ್ ಈ ಮೊದಲೇ ಉದ್ಘಾಟಿಸಲಾಗಿದೆ. ಈಗ ಕುಟ್ಟನಾಡ್‍ನಿಂದ ಮಂಗಳೂರು ವರೆಗಿನ ಬಾಕಿ ಉಳಿದಿರುವ ಭಾಗವನ್ನು ಈ ತಿಂಗಳ ಮಧ್ಯದಲ್ಲಿ ಕಮಿಶನ್ ಮಾಡಲಾಗುವುದು. ಜಿಲ್ಲೆಯಲ್ಲಿ 80 ಕಿಲೋ ಮೀಟರ್ ಪೈಪ್‍ಲೈನ್ ಹಾಕಲಾಗಿದೆ. ಕಣ್ಣೂರಿನಲ್ಲಿ 6, ಕಾಸರಗೋಡು ಜಿಲ್ಲೆಯಲ್ಲಿ 4 ವಾಲ್ವ್‍ಗಳನ್ನು ಅಳವಡಿಸಲಾಗಿದೆ.