ವಾಷಿಂಗ್ಟನ್:ಶ್ವೇತಭವನದ ಹೊರಗೆ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬನ ಮೇಲೆ ರಹಸ್ಯ ಸೇವಾ ಪಡೆ ಸಿಬ್ಬಂದಿ ಗುಂಡು ಹಾರಿಸಿ ರಕ್ಷಿಸಲು ನೋಡಿರುವ ಘಟನೆ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಶ್ವೇತಭವನದ ಹೊರಗೆ ನಡೆದಿದೆ. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಹೋಗಿ ವಿಷಯ ತಿಳಿದುಕೊಂಡು ಬಂದು ಮತ್ತೆ ಸುದ್ದಿಗೋಷ್ಠಿಯನ್ನು ಮುಂದುವರಿಸಿದ್ದಾರೆ.
ನಿನ್ನೆ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಶ್ವೇತಭವನದ ಹೊರಗೆ ಉತ್ತರ ಭಾಗದಲ್ಲಿ ಗುಂಡಿನ ಶಬ್ದ ಕೇಳಿಸಿತ್ತು. ಕೂಡಲೇ ರಕ್ಷಣಾ ಕ್ರಮವಾಗಿ ರಹಸ್ಯ ಸೇವಾ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸ್ವಯಂಚಾಲಿತ ರೈಫಲ್ ಗಳಿಂದ ಗುಂಡು ಹಾರಿಸಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೇ ನಿಲ್ಲಿಸಿ ಹೊರಗೆ ಹೋಗಿ ವಿಚಾರಿಸಿದ್ದಾರೆ. ಸ್ವಲ್ಪ ಹೊತ್ತು ಕಳೆದ ನಂತರ ವಾಪಸ್ ಬಂದು ಪತ್ರಕರ್ತರನ್ನು ಉದ್ದೇಶಿಸಿ, ಶ್ವೇತಭವನದ ಹೊರಗೆ ಉತ್ತರ ದಿಕ್ಕಿನಲ್ಲಿ ಯಾರೋ ಗುಂಡು ಹಾರಿಸಿದರು. ರಕ್ಷಣಾತ್ಮಕವಾಗಿ ರಹಸ್ಯ ಪಡೆ ಸಿಬ್ಬಂದಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದು ಆತ ಗಾಯಗೊಂಡು ಆಸ್ಪತ್ರೆಗೆ ಹೋಗಿದ್ದಾನೆ. ಆತ ಯಾರು, ಯಾವ ಉದ್ದೇಶಕ್ಕಾಗಿ ಆತ ಗುಂಡು ಹಾರಿಸಿದ ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ಶ್ವೇತಭವನದ ಹೊರಗೆ ಪರಿಸ್ಥಿತಿ ಸಹಜವಾಗಿದ್ದು ಉತ್ತರ ಭಾಗದ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕೃತ ವಾಹನಗಳು ಪೆನ್ಸಿಲ್ವೇನಿಯಾ ಅವೆನ್ಯೂ 17ನೇ ರಸ್ತೆಯಲ್ಲಿ ತಂಗಿವೆ.