ಕಾಸರಗೋಡು: ಕಾಞಂಗಾಡ್ ನಗರಸಭೆ ಮತ್ತು ಬೇಡಡ್ಕ ಗ್ರಾ.ಪಂ.ಗಳು ಸಂಪೂರ್ಣ ಶುಚಿತ್ವದ ಗರಿಮೆಗೆ ಪಾತ್ರವಾಗಿದೆ. ಕಂದಾಯ ಸಚಿವ ಇ.ಚದ್ರಶೇಖರನ್ ಈ ಘೋಷಣೆ ನಡೆಸಿದರು.
ರಾಷ್ಟ್ರೀಯ ಹರಿತ ಟ್ರಿಬ್ಯೂನಲ್ ಆದೇಶ ಪ್ರಕಾರ ಜಾರಿಗೊಳಿಸಿದ 12 ಘಟಕಗಳನ್ನು ಪರಿಶೀಲಿಸಿ ಈ ಪದವಿಗೆ ಕಾಞಂಗಾಡ್ ನಗರಸಭೆಯನ್ನು ಆಯ್ಕೆ ಮಾಡಲಾಗಿದೆ. ತ್ಯಾಜ್ಯ ನಿವಾರಣೆಗಾಗಿ ತ್ಯಾಜ್ಯ ಸಂಸ್ಕರಣ ಕೇಂದ್ರ ಸ್ಥಾಪಿಸಿದುದು, ತ್ಯಾಜ್ಯಗಳನ್ನು ಮೂಲದಿಂದಲೇ ವಿಂಗಡಿಸಿದುದು, ನಗರಸಭೆ ವ್ಯಾಪ್ತಿಯ ಸುಮಾರು 21 ಸಾವಿರ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿದುದು, ಸರ್ಕಾರಿ ಕಚೇರಿಗಳಿಂದ, ಸಾರ್ವಜನಿಕ ಪ್ರದೇಶಗಳಿಂದ ತ್ಯಾಜ್ಯ ತೆರವುಗೊಳಿಸಿದುದು, ಸಮಾರಂಭಗಳಲ್ಲಿ ಹಸುರು ಸಂಹಿತೆ ಪಾಲಿಸಿದುದು, ವಿವಿಧೆಡೆ ಸಾರ್ವಜನಿಕ ಶೌಚಾಲಯ ಸ್ಥಾಪಿಸಿದುದು ಇತ್ಯಾದಿಗಳನ್ನು ಪರಿಶೀಲಿಸಿ ಈ ಪದವಿ ಪ್ರದಾನ ಮಾಡಲಾಗಿದೆ.
ಕಾಞಂಗಾಡ್ ನಗರಸಭೆ ಸಭಾಂಗಣದಲ್ಲಿ ಈ ಸಂಬಂಧ ಜರಗಿದ ಸಮಾರಂಭದಲ್ಲಿ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಪಿ.ಜಾಫರ್, ಕಾರ್ಯದರ್ಶಿ ಎಂ.ಕೆ.ಗಿರೀಶ್, ಆರೋಗ್ಯ ಮೇಲ್ವಿಚಾರಕ ರಾಜಗೋಪಾಲನ್ ಮೊದಲಾದವರು ಉಪಸ್ಥಿತರಿದ್ದರು.
ಬೇಡಡ್ಕ ಗ್ರಾಮಪಂಚಾಯತ್ ಗೂ ಸಂಪೂರ್ಣ ಶುಚಿತ್ವ:
ಬೇಡಡ್ಕ ಗ್ರಾಮಪಂಚಾಯತ್ ಸಂಪೂರ್ಣ ಶುಚಿತ್ವದ ಗೌರವಕ್ಕೆ ಪಾತ್ರವಾಗಿದೆ. ಗ್ರಾಮ ಪಂಚಾಯತ್ ಫೇಸ್ ಬುಕ್ ಪುಟದಲ್ಲಿ ನಡೆದ ಲೈನ್ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಈ ಸಂಬಂಧ ಘೋಷಣೆ ನಡೆಸಿದರು.
ಕಳೆದ 5 ವರ್ಷಗಳಿಂದ ಗ್ರಾಮಪಂಚಾಯತ್ ತ್ಯಾಜ್ಯ ನಿವಾರಣೆಯಲ್ಲಿ ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಿ ಈ ಅಂಗೀಕಾರ ನೀಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹರಿತ ಕ್ರಿಯಾ ಸೇನೆ ರಚಿಸಿ, ಅತ್ಯುತ್ತಮ ಚಟುವಟಿಕೆ ನಡೆಸಿದ ಹೆಗ್ಗಳಿಕೆ ಬೇಡಡ್ಕ ಪಂಚಾಯತ್ ನದು. ಬಂಜರು ಭೂಮಿ ಹಸುರುಗೊಳಿಸುವ ಕಾರ್ಯಕ್ರಮಕ್ಕಾಗಿ ಅತ್ಯುತ್ತಮ ಚಟುವಟಿಕೆ ನಡೆಸಿದ ಪಂಚಾಯತ್ ಆಗಿ ಬೇಡಡ್ಕ 2020ರಲ್ಲಿ ಆಯ್ಕೆಗೊಂಡಿತ್ತು.
ಇಲ್ಲಿ ರಾಷ್ಟೀಯ ಹರಿತ ಟ್ರಿಬ್ಯೂನಲ್ ಮೇಲ್ನೋಟದಲ್ಲಿ ತ್ಯಾಜ್ಯ ನಿವಾರಣೆ ಸಂಬಂಧ ನಡೆಸಿದ ಚಟುವಟಿಕೆಗಳು ವ್ಯಾಪಕ ಪ್ರಶಂಸೆಗೆ ಕಾರಣವಾಗಿವೆ. ರಾಜ್ಯಯ ಸರಕಾರ ಆದೇಶಿಸಿರುವ 12 ಘಟಕಗಳನ್ನು ಜಾರಿಗೊಳಿಸಿದುದು, ಹರಿತ ಕೇರಳ ಮಿಷನ್ ನ ಅಂಗೀಕಾರ, ಕಲೆಕ್ಟರ್ಸ್ ಎಟ್ ಸ್ಕೂಲ್, 81 ಶುಚಿತ್ವ ಚಟುವಟಿಕೆಗಳು, ಜನಜಾಗೃತಿ ಕಾರ್ಯಕ್ರಮಗಳು, ಇವಕ್ಕೆ ಸಂಬಂಧಿಸಿ ನಡೆಸಿದ ಬೀದಿನಾಟಕಗಳು, ಹಸುರು ಸಂಹಿತೆ ಪಾಲಿಸಿ ನಡೆಸಿದ ಸಮಾರಂಭಗಳು ಇತ್ಯಾದಿಗಳ ಪರಿಶೀಲನೆಯಿಂದ ಸಂಪೂರ್ಣ ಶುಚಿತ್ವ ಪದವಿ ಲಭಿಸಿದೆ.
ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಶುಚಿತ್ವ ಮಿಷನ್ ಸಂಚಾಲಕಿ ಎ.ಲಕ್ಷ್ಮಿ, ಪಂಚಾಯತ್ ಕಾರ್ಯದರ್ಶಿ ಮನೋಜ್ ಕುಮಾರ್, ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು.