ತಿರುವನಂತಪುರ: ಚಿನ್ನದ ಕಳ್ಳಸಾಗಣೆ ಪ್ರಕರಣದ ಸಿಬಿಐ ತನಿಖೆ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸ್ಪೀಕ್ ಅಪ್ ಕೇರಳ ಅಂಕಿತದಲ್ಲಿ ಯುಡಿಎಫ್ ಸಂಸದರು, ಶಾಸಕರು ಮತ್ತು ಇತರ ಹಿರಿಯ ಮುಖಂಡರ ಬೆಂಬಲದೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದವು. ಕೋವಿಡ್ ನಿಬಂಧನೆಗಳನ್ನು ಅನುಸರಿಸಿ ನೇತಾರರು, ಕಾರ್ಯಕರ್ತರು ಮನೆ ಹಾಗೂ ಕಚೇರಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಿತು. ಕೇರಳದ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಸತ್ಯಾಗ್ರಹವನ್ನು ಉದ್ಘಾಟಿಸಿದರು. ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ತಿರುವನಂತಪುರ ಕಂಟೋನ್ಮೆಂಟ್ ಹೌಸ್‍ನಲ್ಲಿ ಸತ್ಯಾಗ್ರಹವನ್ನು ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸುವ ಯುಡಿಎಫ್ ನಾಯಕರು ತಮ್ಮ ಫೇಸ್‍ಬುಕ್ ಪುಟ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಂದಿಗೆ ಸಂವಹನ ನಡೆಸಿದರು. ಉದ್ಘಾಟನಾ ಕಾರ್ಯಕ್ರಮವು ವೀಡಿಯೊ ಕಾನ್ಫರೆನ್ಸ್ ಅಪ್ಲಿಕೇಶನ್‍ನಲ್ಲಿಯೂ ಲಭ್ಯವಿತ್ತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಎನ್‍ಐಎ ನಡೆಸುತ್ತಿರುವ ತನಿಖೆಯ ಬಗ್ಗೆ ಪ್ರತಿಪಕ್ಷಗಳು ಮಾಡಿರುವ ಆರೋಪಗಳನ್ನು ಮುಖ್ಯಮಂತ್ರಿ ಮತ್ತು ಎಲ್‍ಡಿಎಫ್ ನಾಯಕತ್ವ ನಿರಾಕರಿಸಿದೆ. ಪ್ರಕರಣದ ಆರೋಪಿಗಳಾಗಿದ್ದ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಐಟಿ ವಿಭಾಗದ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಸರ್ಕಾರಿ ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸರಿತ್ ಅವರೊಂದಿಗೆ ನಿಕಟ ಪರಿಚಯವಿದೆ ಎಂದು ಒಪ್ಪಿಕೊಂಡ ಎಂ.ಶಿವಶಂಕರ್ ವಿರುದ್ಧ ತನಿಖಾಧಿಕಾರಿಗಳು ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ.
ಸೋಮವಾರ ನಡೆದ ಪ್ರತಿಭಟನೆಯ ಬಳಿಕ ಆಗಸ್ಟ್ 10 ರಂದು ಸ್ಪೀಕ್ ಅಪ್ ಪ್ರತಿಭಟನೆಯನ್ನು ರಾಜ್ಯದ ಎಲ್ಲಾ ವಾರ್ಡ್‍ಗಳಲ್ಲಿ ಆಯೋಜಿಸಲಾಗುವುದು. ಸದಸ್ಯರಲ್ಲದ ವಾರ್ಡ್‍ಗಳಲ್ಲಿನ ವಾರ್ಡ್ ಸದಸ್ಯರು ಮತ್ತು ಯುಡಿಎಫ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸುವರು.