ನವದೆಹಲಿ: ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಮತ್ತು ಸ್ಥಾಪಿತ ಸಂಪ್ರದಾಯಗಳಿಗೆ ವಿರುದ್ಧವಾಗಿ ನಿಂತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತೀಯ ಪ್ರಜಾಪ್ರಭುತ್ವ ಕುರಿತು ಆತ್ಮಾವಲೋಕನ ಸಂದರ್ಭ ಎದುರಾಗಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ದೇಶದ ಜನತೆಗೆ ನೀಡಿರುವ ಸಂದೇಶದಲ್ಲಿ ಅವರು, ಸ್ವಾತಂತ್ರ್ಯ ಪಡೆದ ಕಳೆದ 74 ವರ್ಷಗಳಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವು ಕಾಲಕಾಲಕ್ಕೆ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಲು ಶ್ರಮಿಸಿದ್ದೇವೆ. ಆದರೆ, ಇಂದು, ಆಡಳಿತಾರೂಢ ಸರ್ಕಾರ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ತತ್ವಗಳಿಗೆ ಮತ್ತು ಸ್ಥಾಪಿತ ಸಂಪ್ರದಾಯಗಳಿಗೆ ವಿರುದ್ಧವಾಗಿ ನಿಂತಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಭಾರತೀಯ ಪ್ರಜಾಪ್ರಭುತ್ವದ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯದ ಅರ್ಥವೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುವಂತೆ ದೇಶದ ಜನರಿಗೆ ಕರೆ ನೀಡಿರುವ ಅವರು, ಇಂದು ಪ್ರತಿಯೊಬ್ಬ ದೇಶವಾಸಿಯೂ ಸ್ವಾತಂತ್ರ್ಯ ಎಂದರೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ, ಪ್ರಶ್ನೆಗಳನ್ನು ಕೇಳುವುದಕ್ಕೆ, ಅಭಿಪ್ರಾಯಗಳನ್ನು ಮಂಡಿಸುವುದಕ್ಕೆ ಸ್ವಾತಂತ್ರ್ಯವಿದೆಯೇ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್, ಭಾರತೀಯರ ಪ್ರಜಾಪ್ರಭುತ್ವ ರುಜುವಾತುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.