ಕಾಸರಗೋಡು : ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಕೃತಿ ದುರಂತಗಳ ಸಂರಕ್ಷಣೆ ಮತ್ತು ಮುಂಜಾಗರೂಕ ಕ್ರಮಗಳು ದುರಂತ ನಿವಾರಣೆ ಪ್ರಾಧಿಕಾರದ ನೇತೃತ್ವದಲ್ಲಿ ನಡೆದುಬರುತ್ತಿದೆ.
ಇದರ ಅಂಗವಾಗಿ ವೆಳ್ಳರಿಕುಂಡ್ ತಾಲೂಕಿನಲ್ಲಿ ನಡೆಯುತ್ತಿರುವ ಸಂರಕ್ಷಣೆ ಚಟುವಟಿಕೆಗಳ ಅಂಗವಾಗಿ ಅಭಯಾರ್ಥಿಗಳ ಶಿಬಿರ ಪ್ರಬಂಧಕರನ್ನು ಮತ್ತು ಪ್ರಭಾರ ಅಧಿಕಾರಿಗಳನ್ನು (ಕ್ಯಾಂಪ್ ಮೆನೆಜರ್, ಚಾರ್ಜ್ ಆಫೀಸರ್ ಗಳು) ನೇಮಿಸಲಾಗಿದೆ. ಈ ಸಂಬಂಧ ಎಲ್ಲ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ಕುಂಞ ಕಣ್ಣನ್ ಆದೇಶ ಪ್ರಕಟಿಸಿದರು.
ಮುಂಜಾಗರೂಕ ಕ್ರಮಗಳ ಅಂಗವಾಗಿ ವೆಳ್ಳರಿಕುಂಡ್ತಾಲೂಕು ವ್ಯಾಪ್ತಿಯಲ್ಲಿ ಪ್ರಕೃತಿ ದುರಂತಗಳಿಗೆ ಈಡಾದವರನ್ನು ಯಥಾ ಸಮಯದಲ್ಲಿ ಅಭಯಾರ್ಥಿ ಶಿಬಿರಗಳಿಗೆ ವರ್ಗಾಯಿಸುವ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಹಾಯ ಒದಗಿಸುವ ನಿಟ್ಟಿನಲ್ಲಿ ನೇಮಕಗೊಂಡ ಅಧಿಕಾರಿಗಳು ನೇತೃತ್ವವಹಿಸುವರು. ಶಿಬಿರಗಳ ಮೇಲ್ನೋಟ ವಹಿಸುವ ಹೊಣೆಹೊತ್ತಿರುವ ಗ್ರಾಮಾಧಿಕಾರಿ ಕಚೇರಿಯ ಇತರ ಸಿಬ್ಬಂದಿಗಳ ಸೇವೆಯನ್ನು ಗ್ರಾಮಾಧಿಕಾರಿ ಬಳಸಿಕೊಳ್ಳುವರು. ಪ್ರಭಾರ ಅಧಿಕಾರಿಗಳು ಶಿಬಿರಗಳಿಗೆ ನೇರವಾಗಿ ತೆರಳಿ ಆಗುಹೋಗುಗಳ ಪರಿಶೀಲನೆ ನಡೆಸಿ, ಅಗತ್ಯದ ಮಾರ್ಗದರ್ಶನ ನೀಡುವರು.
ಕಾಸರಗೋಡು ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನ ಪ್ರಕಾರ ಮೆನೆಜರ್ ಮತ್ತು ಚಾರ್ಜ್ ಅಧಿಕಾರಿಗಳ ನೇಮಕ ನಡೆಸಲಾಗಿದೆ.