ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸಂಬಂಧ ಕೆಲವು ಸಾಮಾಜಿಕ ಜಾಲತಾಣಗಳ ಸಹಿತ ಕೆಲವು ಮಾಧ್ಯಮಗಳಲ್ಲಿ ಜನತೆಗೆ ತಪ್ಪು ಮಾಹಿತಿ ನೀಡುವ ಹುಸಿವಾರ್ತೆ ಗಳನ್ನು ರಚಿಸಿ, ಪ್ರಕಟಿಸಲಾಗುತ್ತಿದೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.
ಈಗಾಗಲೇ ಇಂಥಾ ಹುಸಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುತ್ತಿರುವ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಇಂಥಾ ಸತ್ಯಕ್ಕೆ ದೂರವಾದ ಸುದ್ದಿಗಳು ಪ್ರಾಮಾಣಿಕವಾಗಿ ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಿಬ್ಬಂದಿ, ಕಾರ್ಯಕರ್ತರ ಮನೋ ಬಲ ಕುಸಿಯುವಂತೆ ಮಾಡಿ, ಚಟುವಟಿಕೆಗಳನ್ನು ಬುಡಮೇಲು ಮಾಡುವ ಯತ್ನವಾಗಿದೆ. ಇದರ ಪರಿಣಾಮ ಪ್ರತಿರೋಧ ಚಟುವಟಿಕೆಗಳ ಮೇಲೆ ವಿಪರೀತ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದವರು ಕಳಕಳಿ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಸೋಂಕು ತಗುಲಿರುವುದು ಖಚಿತಗೊಂಡಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯ ಅಧಿಕೃತ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಕಲಿ ಸುದ್ದಿಗಳನ್ನು ಹಂಚುವ ಬದಲು, ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಗಳನ್ನು ಗರಿಷ್ಠ ಮಟ್ಟದಲ್ಲಿ ಪಸರಿಸುವ ಮೂಲಕ ಸಾರ್ವಜನಿಕರು ಪ್ರತಿರೋಧ ಚಟುವಟಿಕೆಗಳಿಗೆ ಹೆಗಲು ನೀಡಲು ಯತ್ನಿಸಬೇಕು ಎಂದವರು ವಿನಂತಿಸಿದರು.