ಕಾಸರಗೋಡು: ಶಿಥಿಲಗೊಂಡು ಭೀತಿ ಮೂಡಿಸುವ ವಾತಾವರಣದಲ್ಲಿ ಪುಟ್ಟ ಮಕ್ಕಳ ಸಹಿತ ಬಡತನದ ಬೇಗೆಯಲ್ಲಿ ಬದುಕುತ್ತಿದ್ದ ಸರೋಜಿನಿ ಅವರಿಗೆ ಈ ಬಾರಿಯ ಓಣಂ ಹಬ್ಬ ಸಡಗರದ ಆಚರಣೆಯಾಗಿದೆ. ಸರ್ಕಾರದ ವತಿಯಿಂದ ಲೈಫ್ ಯೋಜನೆಯನ್ವಯ ಇವರಿಗೆ ಹೊಸ ಮನೆ ಲಭಿಸಿದೆ. ಪತಿ ತೊರೆದು ಹೋದ ಕಾರಣ ಬೀಡಿ ಕಟ್ಟುವ ಮೂಲಕ. ಕೂಲಿ ಕಾರ್ಮಿಕತನ ನಡೆಸಿ ಬದುಕು ಸಾಗಿಸುತ್ತಿರುವ ಸರೋಜಿನಿ ಅವರು ಪುತ್ರಿಯ ಪದವಿ ತರಗತಿ, ಪುತ್ರನ ಪ್ಲಸ್-ಟು ಕಲಿಗೆ ಪೂರಕವಾಗುತ್ತಾ ಬದುಕು ಸಾಗಿ ಬಂದಿದೆ. ಸುಮಾರು 35 ವರ್ಷದ ಹಿಂದಿನ ಶಿಥಿಲ, ಸೋರುವ ಹೆಂಚಿನ ಮನೆಯ ಮೇಲ್ಭಾಗಕ್ಕೆ ಟರ್ಪಾಲು ಶೀಟು ಹಾಸಿ, ಇವರ ಬದುಕು ಸಾಗಿತ್ತು. ಪುತ್ರಿ ಶಾಲಿನಿ ಅವರ ವಿವಾಹವೂ ಇದೇ ಮನೆಯಲ್ಲಿ ನಡೆದಿದೆ. ಈಗವರು ಪತಿಯ ಪನೆಯಾಲದಲ್ಲಿರುವ ಮನೆಯಲ್ಲಿದ್ದಾರೆ.
ಈ ಮಧ್ಯೆ ಸರ್ಕಾರದ ಲೈಫ್ ಮಿಷನ್ ಯೋಜನೆಗಾಗಿ ಸರೋಜಿನಿ ಅವರು ಅರ್ಜಿ ಸಲ್ಲಿಸಿದ್ದರು. ಇಲ್ಲಿ ಅರ್ಹರ ಪಟ್ಟಿಗೆ ಸೇರಿದ್ದ ಸರೋಜಿನಿ ಅವರಿಗೆ ಇಂದು ಸುಸಜ್ಜಿತ ಮನೆಯಲ್ಲಿ ವಾಸಿಸುವ ಅವಕಾಶ ಲಭಿಸಿದೆ. ನನ್ನ ಇಡೀ ಆಯುಷ್ಯದಲ್ಲಿ ಅಹೋರಾತ್ರಿ ದುಡಿದರೂ, ಇಂಥಾ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸುವ ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಬಾರಿಯ ಓಣಂ ಹಬ್ಬವನ್ನು ನೂತನ ಗೃಹದಲ್ಲಿ ಸಂಭ್ರಮದೊಂದಿಗೆ ಆಚರಿಸಿಕೊಳ್ಳುವ ಸಿದ್ಧತೆಯಲ್ಲಿ ಅವರಿದ್ದಾರೆ.