ಕುಂಬಳೆ: ಜಿಲ್ಲೆಯ ಅತಿದೊಡ್ಡ ಪಕ್ಷಿಧಾಮವಾದ ಕುಂಬಳೆ ಸಮೀಪದ ಕಿದೂರು ಪಕ್ಷಿ ಪ್ರಿಯರಿಗೆ ವಸತಿ ನಿಲಯವನ್ನು ನಿರ್ಮಿಸುವ ಯೋಜನೆ ಸಿದ್ದಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಲು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಶುಕ್ರವಾರ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.
ಕಿದೂರು ಪಕ್ಷಧಾಮದ ಬಳಿಯ 45 ಸೆಂಟ್ಸ್ ಕಂದಾಯ ಜಾಗ ಡೋರ್ಮಿಟರಿಗಾಗಿ ನಿಗದಿಪಡಿಸಲಾಗಿದೆ. ಹಕ್ಕಿಗಳ ವೀಕ್ಷಣೆಗೆ ಆಗಮಿಸುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಡೋರ್ಮಿಟರಿ ಅನುಕೂಲಕರವಾಗಲಿದೆ. ಜಿಲ್ಲಾಧಿಕಾರಿ ಅವರ ಆದೇಶ ಪ್ರಕಾರ ಡಿ.ಟಿ.ಪಿ.ಸಿ. ಈ ಯೋಜನೆಯ ಮೇಲ್ನೋಟ ವಹಿಸಲಿದೆ. ನಿಗದಿಪಡಿಸಲಾದ ಜಾಗದ ದಾಖಲೆ ಪತ್ರಗಳನ್ನು ಗ್ರಾಮಾಧಿಕಾರಿ ಈಗಾಗಲೇ ಹಸ್ತಾಂತರಿಸಿದ್ದಾರೆ ಎಂದು ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ತಿಳಿಸಿದರು. ಈ ಹಿಂದೆ ಒಂದು ಜಾಗವನ್ನು ಪತ್ತೆಮಾಡಿದ್ದರೂ, ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟು ನೂತನ ಜಾಗ ನಿಗದಿಪಡಿಸಲಾಗಿದೆ ಎಂದವರು ತಿಳಿಸಿದರು.
ಡಿಸೆಂಬರ್ ನಲ್ಲಿ ನಿರ್ಮಾಣ ಪೂರ್ಣ:
ಈ ಡೋರ್ಮಿಟರಿಯ ನಿರ್ಮಾಣ ಈ ತಿಂಗಳಲ್ಲೇ ಆರಂಭಗೊಳ್ಳಲಿದ್ದು, ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ಗುರಿ ಇರಿಸಲಾಗಿದೆ. ಗರಿಷ್ಠ ಮಟ್ಟದಲ್ಲಿ ಪ್ರಕೃತಿ ಸ್ನೇಹಿಯಾಗಿ ಈ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಬಿದಿರು ಸಹಿತ ಪ್ರಾಕೃತಿಕ ಉತ್ಪನ್ನಗಳ ಬಳಕೆಯೊಂದಿಗೆ ನಿರ್ಮಾಣ ಕಾರ್ಯಗಳು ನಡೆಯಲಿವೆ. ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ಮಾಣದ ನೇತೃತ್ವ ವಹಿಸಲಿದೆ. ಪ್ರವಾಸೋದ್ಯಮ ಇಲಾಖೆಯ ಎಂಪಾನಲ್ಡ್ ಪಟ್ಟಿಯಲ್ಲಿರುವ ಕೊಚ್ಚಿಯ ಸಂಕಲ್ಪ್ ಆರ್ಕಿಟೆಕ್ಚರ್ ಸಂಸ್ಥೆಯು ಕಟ್ಟಡದ ಡಿಸೈನ್ ಸಿದ್ಧಪಡಿಸಲಿದೆ. ಡೋರ್ಮಿಟರಿ ಕೋಣೆಗಳು, ಕಿರು ಸಭಾಂಗಣ, ಅಡುಗೆಮನೆ, ಶೌಚಾಲಯ ಸಹಿತ ಎಲ್ಲ ಮೂಲಭೂತ ಸೌಲಭ್ಯಗಳು ಈ ಒಂದು ಅಂತಸ್ತಿನ ಕಟ್ಟಡದಲ್ಲಿ ಇರುವುವು.
ಗೈಡ್ ಗಳ ಸೇವೆಯೂ ಲಭ್ಯ:
ಕಿದೂರು ಪಕ್ಷಿ ಧಾಮಕ್ಕೆ ಹಕ್ಕಿ ವೀಕ್ಷಣೆಗಾಗಿ ಆಗಮಿಸುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ಇತ್ಯಾದಿ ಒದಗಿಸುವ ನಿಟ್ಟಿನಲ್ಲಿ ಗೈಡ್ ಗಳ ಸೇವೆಯೂ ಲಭ್ಯವಾಗಲಿದೆ ಎಂದು ಕುಂಬಳೆ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ತಿಳಿಸಿದರು.
ಸಾರ್ವಜನಿಕರ ಬೆಂಬಲದೊಂದಿಗೆ ಪಕ್ಷಿ ಧಾಮದ ಅಭಿವೃದ್ಧಿ ಮುಂದುವರಿಯಲಿದೆ. ಡೋರ್ಮಿಟರಿಗೆ ಆಗಮಿಸುವ ವೀಕ್ಷಕರಿಗೆ ಮಿತದರದಲ್ಲಿ ಭೋಜನ ಸೌಲಭ್ಯ ಒದಗಿಸಲಾಗುವುದು ಎಂದವರು ತಿಳಿಸಿದರು.
2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ:
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ, ಕುಂಬಳೆ ಗ್ರಾಮೀಣ ಅಭಿವೃದ್ಧಿ ಯೋಜನೆ ಪ್ರಕಾರ ಕಿದೂರಿನಲ್ಲಿ ಡೋರ್ಮಿ ಟರಿ ನಿರ್ಮಿಸಲಾಗುವುದು. ಈ ಕಟ್ಟಡ ನಿರ್ಮಾಣ ಮೂಲಕ ಈ ವಲಯಕ್ಕೆ ವೀಕ್ಷಣೆಗಾಗಿ ಮತ್ತು ಶಿಬಿರ ನಡೆಸಲು ಆಗಮಿಸುವವರ ಸಂಖ್ಯೆಯೂ ಅಧಿಕಗೊಳ್ಳುವ ಸಕಾರಾತ್ಮಕ ನಿರೀಕ್ಷೆಗಳಿವೆ.
ವಸತಿಯೊಂದಿಗೆ ವೀಕ್ಷಣೆಗೆ ಸೌಲಭ್ಯ:
ಪಕ್ಷಿ ಧಾಮದ ಬಳಿಯೇ ವಸತಿ ಸೌಲಭ್ಯವೂ ಲಭಿಸುವುದು ವೀಕ್ಷಕರಿಗೆ ವರದಾಯಕವಾಗಲಿದೆ. ಡೋರ್ಮಿಟರಿ ನಿರ್ಮಾಣ ಮೂಲಕ ರಾತ್ರಿ ಕಾಲದ ಹಕ್ಕಿ ವೀಕ್ಷಣೆಗೂ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಈಗಾಗಲೇ ವಿದೇಶೀಯರ ಸಹಿತ ಅನೇಕ ಮಂದಿ ಹಕ್ಕಿಪ್ರಿಯರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ವಂಶನಾಶ ಭೀತಿಯನ್ನು ಎದುರಿಸುತ್ತಿರುವ ಜುಟ್ಟಿನ ಬುಲ್ ಬುಲ್, ಬಿಳಿ ಕೊಕ್ಕರೆ, ಕಡಲಕಾಗೆ ಸಹಿತ ಅಲೆಮಾರಿ ಹಕ್ಕಿಗಳ ವಿಹಾರ ತಾಣ ಇದಾಗಿದೆ. ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಗರುಡ, ವಿಶೇಷ ತಳಿಯ ಪಾರಿವಾಳ ಸಹಿತ ಹಕ್ಕಿಗಳೂ ಇಲ್ಲಿವೆ. ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡುಬರುವ ಹಳದಿ ಗೆರೆಗಳನ್ನು ಹೊಂದಿರುವ ಪಾರಿವಾಳಗಳು ವೀಕ್ಷಕರ ಪ್ರಧಾನ ಆಕರ್ಷಣೆಯಾಗಿವೆ. ಹಕ್ಕಿ ವೀಕ್ಷಕರು ಪ್ರತಿವರ್ಷ ಅನೇಕ ಶಿಬಿರಗಳನ್ನು ಈ ಹಕ್ಕಿಧಾಮದಲ್ಲಿ ನಡೆಸುತ್ತಾರೆ.