ಕಾಸರಗೋಡು: ಲೈಫ್ ಮಿಷನ್ ನ ಮೂರನೇ ಹಂತವಾಗಿರುವ ಪೈಲೆಟ್ ಯೋಜನೆಯ ನಿರ್ಮಾಣ ಚಟುವಟಿಕೆಗಳು ಕಾಸರಗೋಡು ಜಿಲ್ಲೆಯಲ್ಲಿ ಪ್ರಗತಿ ಸಾಧಿಸುತ್ತಿವೆ.
ವಸತಿಯಿಲ್ಲದ, ಸ್ವಂತ ಜಾಗವಿಲ್ಲದ ಮಂದಿಗೆ ಸ್ವಂತದ ಸೂರು ಒದಗಿಸುವ ಜನಪರ ಕಾರ್ಯಕ್ರಮವೇ ಲೈಫ್ ಮಿಷನ್ನ ಈ ಮೂರನೇ ಹಂತವಾಗಿರುವ ಪೈಲೆಟ್ ಯೋಜನೆ.
ಇದರ ಕಾಸರಗೋಡು ಜಿಲ್ಲಾ ಮಟ್ಟದ ಪ್ರಥಮ ವಸತಿ ಸಮುಚ್ಚಯ ಚೆಮ್ನಾಡ್ ಗ್ರಾಮಪಂಚಾಯತ್ ನ ಚಟ್ಟಂಚಾಲಿನಲ್ಲಿ ನಡೆಯುತ್ತಿದೆ. 6.49 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆ ಮುಂದಿನ ವರ್ಷ ಜನವರಿ ತಿಂಗಳಲ್ಲಿ ಪೂರ್ತಿಗೊಳ್ಳುವ ನಿರೀಕ್ಷೆಯಿದೆ ಎಂದು ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸನ್ ತಿಳಿಸಿದರು.
ತೆಕ್ಕಿಲ್ ಗ್ರಾಮದಲ್ಲಿ ಪತ್ತೆ ಮಾಡಲಾದ ಒಂದು ಎಕ್ರೆ ಜಾಗದಲ್ಲಿ 4 ಅಂತಸ್ತಿನ ಫ್ಲಾಟ್ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಕೋವಿಡ್ ಪ್ರತಿರೋಧ ನಿಯಂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಇಲ್ಲಿ ನಿರ್ಮಾಣ ಚಟುವಟಿಕೆಗಳು ನಡೆದುಬರುತ್ತಿವೆ. ಈ ವಲಯವನ್ನು ಕಂಟೈ ನ್ಮೆಂಟ್ ಝೋನ್ ಆಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಮಗಾರಿ ಕೊಂಚ ವಿಳಂಬ ಗತಿಯಲ್ಲಿದೆ. ಕಾರ್ಮಿಕರ ಲಭ್ಯತೆಯೂ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗುತ್ತಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಈ ಜಾಗವನ್ನು ಯೋಜನೆಗಾಗಿ ಚೆಮ್ನಾಡ್ ಗ್ರಾಮ ಪಂಚಾಯತ್ ನೀಡಿದೆ. ತ್ರಿಶೂರು ಜಿಲ್ಲಾ ಕಾರ್ಮಿಕ ಗುತ್ತಿಗೆ ಸೇವೆ ಸೊಸೈಟಿ ಈ ಕಟ್ಟಡ ನಿರ್ಮಾಣದ ಮೇಲ್ನೋಟ ವಹಿಸುತ್ತಿದ್ದು, ಪೆನ್ನಾರ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಮಾಣ ಚಟುವಟಿಕೆ ವಹಿಸಿಕೊಂಡಿದೆ. ಅನಿವಾರ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ 44 ಕುಟುಂಬಗಳು ಏಕಕಾಲಕ್ಕೆ ವಸತಿ ಹೂಡಬಹುದಾದ ರೀತಿಯಲ್ಲಿ ಇಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.
ಮೂರನೇ ಹಂತದಲ್ಲಿ 2730 ಫಲಾನುಭವಿಗಳು:
ಲೈಫ್ ಮಿಷನ್ ನ ಮೂರನೇ ಹಂತದ ಪೈಲೆಟ್ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ 2730 ಮಂದಿ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ.
ಲೈಫ್ ಮಿಷನ್ ನ ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 2886 ಮನೆಗಳು ನಿರ್ಮಾಣವಾಗಿ ಹಸ್ತಾಂತರಗೊಂಡಿವೆ. ಎರಡನೇ ಹಂತದಲ್ಲಿ 2891 ಮನೆಗಳು ನಿರ್ಮಾಣವಾಗಿ ಹಸ್ತಾಂತರವಾಗಿವೆ. ಪಿ.ಎ.ಎಂ.ವೈ. ರೂರಲ್ ವಿಭಾಗದಲ್ಲಿ 568, ಪಿ.ಎ.ಎಂ.ವೈ. ಅರ್ಬನ್ ವಿಭಾಗದಲ್ಲಿ 1165 ಮನೆಗಳು ಫಲಾನುಭವಿಗಳಿಗೆ ಲಭಿಸಿವೆ.
ಸ್ವಂತದೊಂದು ಮನೆ ಹೊಂದುವುದು ಕುಟುಂಬವೊಂದರ ಬಲುದೊಡ್ಡ ಕನಸು. ಅದನ್ನು ಪೂರೈಸುವಲ್ಲಿ ರಾಜ್ಯ ಸರಕಾರ ಈ ಜನಪರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಮನೆಯೊಂದು ಕಟ್ಟಿಕೊಡುವ ಜೊತೆಗೆ ಇದಕ್ಕೆ ಪೂರಕವಾದ ಸೇವೆಗಳನ್ನೂ ಜತೆಯಲ್ಲೇ ಒದಗಿಸುವಲ್ಲೂ ರಾಜ್ಯ ಸರಕಾರ ಕಾಳಜಿ ವಹಿಸಿಕೊಂಡಿದೆ.
ಚಿತ್ರ ಮಾಹಿತಿ: ಚಟ್ಟಂಚಾಲ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಲೈಫ್ ಮಿಷನ್ ಫ್ಲಾಟ್ ಯೋಜನೆಯ ವಸತಿ ಸಮುಚ್ಚಯ.