ಉಪ್ಪಳ: ಮಳೆ, ಗಾಳಿ ಬಿರುಸುಗೊಂಡಿರುವಂತೆ ಕಡಲ್ಕೊರೆತ ವ್ಯಾಪಕಗೊಂಡಿದ್ದು ಉಪ್ಪಳದ ಮುಸೋಡಿ, ಶಾರದಾ ನಗರ ಸಹಿತ ಕಡಲ ತಡಿ ಪ್ರದೇಶಗಳ ಹಲವು ಮನೆಗಳು ಅಪಾಯದ ಭೀತಿಯಲ್ಲಿದೆ. ಮುಸೋಡಿಯಲ್ಲಿ ಕಳೆದ ಎರಡು ದಿನಗಳಿಂದ 50 ಮೀಟರ್ ಗಳಷ್ಟು ತೀರವನ್ನು ಸಮುದ್ರ ಆಕ್ರಮಿಸಿದೆ. ಇಲ್ಲಿಯ ಎರಡು ಮನೆಗಳು ತೀವ್ರ ಅಪಾಯದಂಚಿನಲ್ಲಿದೆ. ಸಮುದ್ರ ಪಾಲಾಗುವ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಐದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತಸ್ಲೀಮಾ, ಮೂಸಾ, ಮರಿಯಮ್ಮ ಎಂಬವರ ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿದ್ದರೆ ಖದೀಜಮ್ಮ, ನಫೀಸ, ಅಸ್ಯಮ್ಮ ಎಂಬವರ ಮನೆಗಳು ಅಪಾಯದ ಅಂಚಿನಲ್ಲಿದೆ.ಕೆಲವು ಮನೆಗಳ ಶೌಚಾಲಯಗಳ ಹೊಂಡ, ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಮನೆಯೊಳಗೆ ನೀರು ತುಂಬಿಕೊಳ್ಳತೊಡಗಿದೆ. ನಫೀಸ, ತಸ್ಲಿಮ, ಮಜೀದ್ ಎಂಬವರ ಮನೆ ಬಿರುಕುಬಿಟ್ಟಿದೆ. ಹನುಮಾನ್ ನಗರದಲ್ಲೂ ಹಲವು ಮನೆಗಳು ಅಪಾಯದ ಅಂಚಿನಲ್ಲಿದೆ.
ಸ್ಥಳಕ್ಕೆ ಮಂಜೇಶ್ವರ ತಹಶೀಲ್ದಾರ್ ಆಂಟೋ ಪಿ.ಜೆ., ಸಹ ಅಧಿಕಾರಿ ಬಿನೋಯ್ ಬೇಬಿ ಬುಧವಾರ ಸಂಜೆ ಭೇಟಿನೀಡಿ ಪರಿಶೀಲನೆ ನಡೆಸಿದರು.
ರಸ್ತೆಗೆ ಕುಸಿದು ಬಿದ್ದ ಗುಡ್ಡೆ-ಸಂಚಾರ ಅಡಚಣೆ:
ಉಪ್ಪಳ: ಗುಡ್ಡೆ ಕುಸಿದು ವ್ಯಕ್ತಿಯೋರ್ವರ ಆವರಣ ಗೋಡೆ ಸಹಿತ ಕಲ್ಲು, ಮಣ್ಣು ರಸ್ತೆ ಬಿದ್ದು ಸಂಚಾರ ಅಡಚಣೆಗೊಂಡ ಘಟನೆ ನಡೆದಿದೆ.
ಬಾಯಾರು ಸಮೀಪದ ಧರ್ಮತ್ತಡ್ಕ-ಸಜಂಕಿಲ ರಸ್ತೆ ಗುಂಪೆ ಬಸ್ ತಂಗುದಾಣದ ಪರಿಸರ ನಿವಾಸಿ ಜಯರಾಮ ನಾಯ್ಕ್ ಎಂಬವರ ಮನೆಯ ಎದುರು ಭಾಗದ ಕಲ್ಲಿನ ಆವರಣ ಗೋಡೆ ಸಹಿತ ರಸ್ತೆ ಬದಿಯ ಗುಡ್ಡೆ ಮಂಗಳವಾರ ರಾತ್ರಿ ಭಾರೀ ಮಳೆಗೆ ಕುಸಿದು ಬಿದ್ದಿತು. ಇದರಿಂದ ಕಲ್ಲು-ಮಣ್ಣುಗಳು ಪರಿಸರದ ರಸ್ತೆಗೆ ಅಡ್ಡಬಿದ್ದಿದ್ದು ಸಂಚಾರ ಸಮಸ್ಯೆ ಉಂಟಾಗಿದೆ. ಬಳಿಕ ತೆರವುಗೊಳಿಸಲಾಯಿತು. ಪೈವಳಿಕೆ ಗ್ರಾ.ಪಂ.ಉಪಾಧ್ಯಕ್ಷೆ ಸುನಿತಾ ವಾಲ್ಟಿ ಡಿಸೋಜ, ಗ್ರಾ.ಪಂ.ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಡ್ಡೆ ಇನ್ನಷ್ಟು ಕುಸಿಯುವ ಭೀತಿಯಿದೆ ಎಂದು ತಂಡ ತಿಳಿಸಿದೆ.
ರಸ್ತೆಗೆ ಗುಡ್ಡ ಕುಸಿತ-ಸಂಚಾರ ಮೊಟಕು
ಪೆರ್ಲ: ಎಣ್ಮಕಜೆ ಗ್ರಾ.ಪಂ.ವ್ಯಾಪ್ತಿಯ ಪೆಲ್ತಾಜೆ ನಾಟೆಕಲ್ಲು ಎಂಬಲ್ಲಿ ಮಣ್ಣು ರಸ್ತೆಗೆ ಕುಸಿದು ಬಿದ್ದು ತೀವ್ರಸಮಚಾರ ಅವ್ಯವಸ್ಥೆ ತಲೆದೋರಿದೆ.
ನಾಟೆಕಲ್ಲು ಪೆಲ್ತಾಜೆ ಪರಿಸರ ನಿವಾಸಿಗಳಿಗೆ ಪೆರ್ಲ ತಲಪಲು ಏಕೈಕ ರಸ್ತೆ ಇದಾಗಿದ್ದು ಇದೀಗ ಕೊಲ್ಲಪದವು ಮೂಲಕ ಐದಾರು ಕಿಲೋಮೀಟರ್ ಸುತ್ತು ಬಳಸಿ ಪೆರ್ಲಕ್ಕೆ ಬರಬೇಕಾಗಿದೆ. ಮಂಗಳವಾರ ರಸ್ತೆ ಮೇಲೆ ಗುಡ್ಡೆ ಕುಸಿದಿದ್ದು ಗುರುವಾರದ ವರೆಗೆ ಯಾವುದೇ ವಿಲೇವಾರಿ ಕ್ರಮ ಕೈಗೊಂಡಿಲ್ಲ ಎಮದು ಆರೋಪಿಸಲಾಗಿದೆ.