ಮಂಜೇಶ್ವರ: ಕಾಸರಗೋಡು ಹಾಗೂ ಮಂಗಳೂರು ನಡುವೆ ದಿನ ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ ಹಾಗೂ ಆರೋಗ್ಯ ಮೊದಲಾದ ವಿಷಯಗಳಿಗಾಗಿ ಸುಮಾರು 40000 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುವರಿದ್ದಾರೆ.
ಪ್ರಸ್ತುತ ಕೊರೋನದಿಂದಾಗಿ ಲಾಕ್ ಡೌನ್ ಹೇರಲ್ಪಟ್ಟ ಬಳಿಕ ಉಭಯ ರಾಜ್ಯಗಳ ಮಧ್ಯೆ ಸಂಚಾರ ನಿಷೇಧಗೊಂಡು ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.ಮತ್ತು ಹಲವರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ ಕೂಡ. ಸೂಕ್ತ ಚಿಕಿತ್ಸೆಗೆ ಕಾಸರಗೋಡಲ್ಲಿ ಆಸ್ಪತ್ರೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಮಂಗಳೂರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಚಿಂತೆಯೂ ಎಲ್ಲರಿಗೂ ಕಾಡಿದೆ.
ಈ ಸಂದರ್ಭದಲ್ಲಿ ಕಾಸರಗೋಡು ಮಂಗಳೂರಿನ ಮಧ್ಯೆ ನಿತ್ಯ ಪಯಾಣಿಗರು ಸಹಯಾತ್ರಿ ಎಂಬ ಒಂದು ಸಂಘಟನೆಯ ಮೂಲಕ ದಕ್ಷಿಣ ಕನ್ನಡಕ್ಕೆ ನಿತ್ಯ ಪ್ರಯಾಣಿಸುವವರ ಹಿತವನ್ನು ಕಾಪಾಡುವ ದೃಷ್ಟಿಯಲ್ಲಿ ಕೆಲವು ಚಟುವಟಿಕೆಗಳನ್ನು ಕೈಗೊಂಡಿದೆ. ಕೇರಳ ಸರ್ಕಾರದ ಧಮನಕಾರಿ ನಡೆಯಿಂದಾಗಿ ತೊಂದರೆಗೊಳಗಾಗಿರುವ ಕಾಸರಗೋಡಿಗರ ಬವಣೆಯ ವಿಚಾರವನ್ನು ರಾಷ್ಟ್ರ ಮಟ್ಟದ ಮಾಧ್ಯಮಗಳಿಗೆ ತಲುಪಿಸುವ ಕೆಲಸ ಸಹಯಾತ್ರಿಯ ಮೂಲಕ ಆಗಿದೆ.
ದೇಶದಾತ್ಯಂತ ಅನ್ ಲಾಕ್ 4 ಆರಂಭವಾಗಿದ್ದು ಅಂತರ್ ರಾಜ್ಯ ಮಕ್ತ ಪ್ರವೇಶವನ್ನು ಆದೇಶಿಸಿದೆ. ಆದರೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಕೇರಳ ಸರ್ಕಾರ ಕೇಂದ್ರದ ಈ ನಿಯಮ ಜಾರಿ ತರುವಲ್ಲಿ ಅನಗತ್ಯ ನಿರ್ಲಕ್ಷ್ಯ ತೋರಿಸುತ್ತಿದೆ. ಇದೀಗ ಜನರ ಒತ್ತಡಗಳಿಗೆ ಮಣಿದ ಕಾಸರಗೋಡು ಜಿಲ್ಲಾಡಳಿತ ಆಂಟಿಜನ್ ಪರೀಕ್ಷೆ ವಾರಕ್ಕೊಮ್ಮೆ ಮಾಡಿ ಅದನ್ನು ಲಗತ್ತಿಸಿದಲ್ಲಿ ಪಾಸ್ ಕೊಡುವುದಾಗಿ ಮೊದಲಿಗೆ ಹೇಳಿತ್ತು. ಬಳಿಕ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನಡೆಸಬೇಕು ಎಂದು ತನ್ನ ನಿಲುವು ಬದಲಿಸಿತು.
ಇದೇ ಸಂದರ್ಭದಲ್ಲಿ ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೇರಳ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ತೀರ್ಮಾನದಂತೆ ಪಾಸ್ ಇಲ್ಲದೆ ಪ್ರವೇಶ ನೀಡಬೇಕು ಹಾಗೂ ಪಾಣತ್ತೂರು, ಜಾಲ್ಸೂರು, ಬಂದಡ್ಕ, ಸಾರಡ್ಕ ಗಡಿ ತೆರೆಯುವಂತೆ ಕೋರ್ಟ್ ಆದೇಶ ನೀಡಿತ್ತು.ಕೋರ್ಟ್ ನ ಈ ಆದೇಶದಂತೆ ಪಾಸ್ ವ್ಯವಸ್ಥೆಯನ್ನು ಹಿಂದೆಗೆದ ಕಾಸರಗೋಡು ಜಿಲ್ಲಾಡಳಿತ ಮತ್ತೊಮ್ಮೆ ಆಂಟಿಜನ್ ನೆಗೆಟಿವ್ ಟೆಸ್ಟ್ ನ್ನು ಕೋವಿಡ್ ಜಾಗೃತ ವೆಬ್ ಸೈಟ್ ನಲ್ಲಿ ದಾಖಲಿಸಬೇಕು ಹಾಗೂ 21 ದಿನಗಳಲ್ಲಿ ಇದನ್ನು ಮತ್ತೊಮ್ಮೆ ಮಾಡಬೇಕೆಂಬ ಅಸ್ವಾಭಾವಿಕ ನಿಯಮ ಜಾರಿಗೊಳಿಸಿದೆ.
ಆದರೆ ಆಂಟಿಜನ್ ಪರೀಕ್ಷೆ , ಸಮಯದ ನಿರ್ಬಂಧ ಹಾಗೂ ಕಡ್ಡಾಯ ಪಾಸ್ ಮುಂತಾದ ಯಾವುದೇ ಷರತ್ತುಗಳನ್ನು ಹಾಕದೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಕಾಸರಗೋಡಿನ ಜನರ ಬೇಡಿಕೆ.
ಕಾಸರಗೋಡು ಜಿಲ್ಲೆಯ ಎಲ್ಲ ಕಡೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭಾಗಗಳಿಗೆ ಸಂಚರಿಸಲು ಅವಕಾಶ ನೀಡಬೇಕೆಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ ಕಾಸರಗೋಡು ಕನ್ನಡಿಗರ ಮನವಿ. ಹಲವು ಬಾರಿ ಕಾಸರಗೋಡು ಜಿಲ್ಲಾಡಳಿತಕ್ಕೆ ಈ ಮನವಿ ನೀಡಿದ್ದರೂ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ.
ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳು ಸೇರಿಕೊಂಡು ಆ.28 ರಂದು
*ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ಹೋರಾಟ ಸಮಿತಿ* ಯನ್ನು ರೂಪಿಸಲಾಗಿದೆ.
ಹೋರಾಟ ಸಮಿತಿಯ ಸಂಚಾಲಕರಾಗಿ ವಿಪಿನ್ ದಾಸ್ ನಂಬಿಯಾರ್ ಅವರನ್ನು ಆಯ್ಕೆಮಾಡಿ ಸಮಿತಿಯ
ಸದಸ್ಯರನ್ನಾಗಿ ಡಾ. ಸಪ್ನಾ ಜೆ ಉಕ್ಕಿನಡ್ಕ, ಭಾಸ್ಕರ್ ಕಾಸರಗೋಡು, ಗಣೇಶ ಭಟ್ ವಾರಣಾಸಿ, ಶಿವಾನಂದ ಚೌಟ ಹಾಗೂ
ಹರಿಪ್ರಸಾದ್ ಕಾನ ಇವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಡಳಿತವು ಗಡಿಗಳನ್ನು ತೆರೆಯದೆ ಗಡಿನಾಡ ಜನರನ್ನು ಸತಾಯಿಸುತ್ತಿರುವುದರ ವಿರುದ್ಧ ವಿವಿಧ ಸ್ತರಗಳಲ್ಲಿ ಹೋರಾಟವನ್ನು ಮಾಡುವುದೆಂದು ಸಮಿತಿಯು ನಿಶ್ಚಯಿಸಿದೆ.