ಕಾಸರಗೋಡು: ಯಾವುದೇ ಲಕ್ಷಣ ಹೊಂದದಿರುವ ಕೋವಿಡ್ ರೋಗಿಗಳಿಗೆ ಸ್ವಗೃಹದಲ್ಲಿ ಚಿಕಿತ್ಸೆಗೆ ಸೌಲಭ್ಯ ಯೋಜನೆಯ ಅಂಗವಾಗಿ ಕುಂಬಳೆ ಗ್ರಾಮ ಪಂಚಾಯತ್ ನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು.
ಕಿರಿಯ ಆರೋಗ್ಯ ಇನ್ಸ್ ಪೆಕ್ಟರ್ ಗಳು, ಕಿರಿಯ ಸಾರ್ವಜನಿಕ ಆರೋಗ್ಯ ದಾದಿಯರು, ಆಶಾ ಕಾರ್ಯಕರ್ತೆಯರು ಮೊದಲಾದವರಿಗೆ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ದಿನದ ತರಬೇತಿ ಒದಗಿಸಲಾಯಿತು. ಕೋವಿಡ್ ಪ್ರತಿರೋಧ ಸಂಹಿತೆ ಪಾಲಿಕೆ ಮೂಲಕ ಈ ಕಾರ್ಯಕ್ರಮ ಜರುಗಿತು.
ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳನ್ನು ಶಿಬಿರಾರ್ಥಿಗಳು ಸಂದರ್ಶಿಸಿದರು. ರೋಗಿಗಳಿಗೆ ಪಲ್ಸ್ ಆಕ್ಸಿ ಮೀಟರ್ ವಿತರಿಸಲಾಯಿತು. ಪ್ರತಿದಿನ ರೀಡಿಂಗ್ ನಡೆಸಿ, ರೋಗ ಮಾಹಿತಿಗಳನ್ನು ಆರೋಗ್ಯ ಕಾರ್ಯಕರ್ತರು ನೀಡಿದ ಚಾರ್ಟ್ ನಲ್ಲಿ ನಮೂದಿಸಬೇಕು. 14 ದಿನಗಳಕಾಲವೂ ಈ ಕ್ರಮ ನಡೆಸಬೇಕು. ಈ ಮಧ್ಯೆ ಉಸಿರಾಟ ತೊಂದರೆ, ಗಂಟಲುನೋವ, ಶೀತ ಹೀಗೆ ರೋಗಲಕ್ಷಣಗಳು ಕಂಡುಬಂದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಮೇರೆಗೆ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆರೋಗ್ಯ ಕಾರ್ಯಕರ್ತರು ರೋಗಿಗಳಿಗೆ ದೂರವಾಣಿ ಕರೆಮಾಡಿ ಯೋಗಕ್ಷೇಮ ವಿಚಾರಣೆ ನಡೆಸುವರು. ಮನೆಗಳಲ್ಲಿ ರೋಗಿಗಳಿಗೆ ಬೇಕಾದ ವ್ಯವಸ್ಥೆಗಳು ಇವೆಯೇ ಎಂಬ ಪರಿಶೀಲನೆಯನ್ನು ವೈದ್ಯಾಧಿಕಾರಿ, ಆರೋಗ್ಯ ಇನ್ಸ್ ಪೆಕ್ಟರ್ ನಡೆಸುವರು. 65 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿ, ಹತ್ತು ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳು, ಶಾಶ್ವತ ರೋಗಿಗಳು, ಗರ್ಭಿಣಿಯರು ಮೊದಲಾದವರು ಇರುವ ಮನೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯಕ್ಕೆ ಅನುಮತಿಯಿಲ್ಲ ಎಂದು ತರಬೇತಿಯ ವೇಳೆ ತಿಳಿಸಲಾಗಿದೆ.
ತರಬೇತಿಗೆ ವೈದ್ಯಾಧಿಕಾರಿ ಡಾ.ದಿವಾಕರ ರೈ, ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಎನ್.ಎಚ್.ಎಂ. ಸಂಚಾಲಕಿ ಕೀರ್ತನಾ ಮೊದಲಾದವರು ನೇತೃತ್ವ ವಹಿಸಿದ್ದರು.