ಅಯೋಧ್ಯೆ: ಅಯೋಧ್ಯೆ ಶ್ರೀರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ರಾಮಾರ್ಚನ ಪೂಜೆ ನೆರವೇರಿದೆ.
ಅಯೋಧ್ಯೆ ಶ್ರೀರಾಮಮಂದಿರದ ಭೂಮಿ ಪೂಜೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ನಾಳೆ ನಡೆಯುವ ಭೂಮಿ ಪೂಜೆಗೆ ಅಯೋಧ್ಯೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಇಂದು ಬೆಳಗ್ಗೆ 9 ಗಂಟೆಯಿಂದಲೇ ಅಯೋಧ್ಯೆಯ ಹನುಮಾನ್ ಗಡಿ ಮಂದಿರದಲ್ಲಿ ಆರು ಅರ್ಚಕರಿಂದ ರಾಮಾರ್ಚನೆ ಪೂಜೆ ಆರಂಭವಾಗಿದೆ. ಐದು ಗಂಟೆಗಳ ಕಾಲ ಪೂಜೆ ನೆರವೇರಲಿದೆ. ರಾಮಾರ್ಚನೆ ಪೂಜೆಯು ಭಗವಾನ್ ರಾಮನ ಆಗಮನಕ್ಕಿಂತ ಮುಂಚಿತವಾಗಿ ಎಲ್ಲಾ ಪ್ರಮುಖ ದೇವರು ಮತ್ತು ದೇವತೆಗಳನ್ನು ಆಹ್ವಾನಿಸುವ ಪ್ರಾರ್ಥನೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಶೋಕ್ ಸಿಂಘಾಲ್ ಫೌಂಡೇಶನ್ ನ ಟ್ರಸ್ಟಿ ಮಹೇಶ್ ಭಾಗಚಂದ್ಕ ಅವರು, ಪೂಜಾ ಕೈಂಕರ್ಯ ಒಟ್ಟು 4 ಹಂತಗಳಲ್ಲಿ ನೆರವೇರಲಿದೆ. ಮೂರನೆಯ ಹಂತದಲ್ಲಿ, ಭಗವಾನ್ ರಾಮನ ತಂದೆಯಾದ ದಶರಥರು ಅವರ ಪತ್ನಿಯರೊಂದಿಗೆ ಪೂಜಿಸಲ್ಪಡುತ್ತಾರೆ ಮತ್ತು ನಂತರ ಭಗವಾನ್ ರಾಮನ ಮೂವರೂ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಅವರ ಹೆಂಡತಿಯರೊಂದಿಗೆ ಪೂಜಿಸಲ್ಪಡುತ್ತಾರೆ. ಇದೇ ಸಂದರ್ಭದಲ್ಲಿ ಭಗವಾನ್ ಹನುಮಂತರನ್ನೂ ಪೂಜಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ಭಗವಾನ್ ರಾಮನನ್ನು ಪೂಜಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ನಾಳೆ ನಡೆಯುವ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಮೋಹನ್ ಭಾಗವತ್, ಬಾಬಾ ರಾಮದೇವ್ ಅಯೋಧ್ಯೆಗೆ ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅಯೋಧ್ಯೆಯ ಭೂಮಿ ಪೂಜೆಗೆ ವಿಶೇಷ ಭದ್ರತೆಯನ್ನು ನಿಯೋಜಿಸಿದ್ದು, ಸ್ಥಳೀಯ ಪೆÇಲೀಸರ ಜೊತೆ ಕೇಂದ್ರ ಭದ್ರತಾ ಪಡೆಯೂ ಸೇರಲಿದೆ. ಪ್ರತಿಯೊಂದು ಏರಿಯಾದಲ್ಲೂ ಹಲವು ಪೆÇಲೀಸರ ನಿಯೋಜನೆ ಮಾಡಲಾಗುತ್ತದೆ.
ಪ್ರಧಾನಿ ಮೋದಿ ಅಯೋಧ್ಯೆ ಪ್ರವಾಸ
ಮೋದಿ ಅವರ ಪ್ರವಾಸ ಪಟ್ಟಿಯ ಪ್ರಕಾರ ಆಗಸ್ಟ್? 5ರಂದು ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಲಖನೌಗೆ ಆಗಮಿಸಲಿರುವ ಮೋದಿ ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅಯೋಧ್ಯೆಗೆ ತೆರಳಲಿದ್ದಾರೆ. ಅಯೋಧ್ಯೆಗೆ ಅವರು ಬೆಳಗ್ಗೆ 11.30ಕ್ಕೆ ತಲುಪುವ ನಿರೀಕ್ಷೆ ಇದ್ದು, ನಂತರ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಯೋಧ್ಯೆಯಲ್ಲಿ ಅವರು ಹನುಮಗಡಿ ದೇವಾಲಯದಲ್ಲಿ ಮೊದಲು ಪೂಜೆ ಸಲ್ಲಿಸಲಿಸದ್ದಾರೆ. ನಂತರ ರಾಮಜನ್ಮಭೂಮಿ ಸ್ಥಳಕ್ಕೆ ತಲುಪಿ ಅಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 12.40ಕ್ಕೆ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸ ನಡೆಯಲಿದ್ದು, ಅದರಲ್ಲಿ ಭಾಗಿಯಾದ ನಂತರ 2 ಗಂಟೆ ಸುಮಾರಿಗೆ ಅಯೋಧ್ಯೆಯಿಂದ ಲಖನೌಗೆ ಹೆಲಿಕಾಫ್ಟರ್ ಮೂಲಕ ಹಿಂದಿರುಗಲಿದ್ದು, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸಾಗಲಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ 175 ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ.