ಬದಿಯಡ್ಕ: ಜಿಲ್ಲೆಯ ಪ್ರಧಾನ ರಸ್ತೆ ಬದಿಯಡ್ಕ ಏತಡ್ಕ ಸುಳ್ಯಪದವು ರಸ್ತೆಯ ಏತಡ್ಕ ಸಮೀಪದ ಕೂಟೇಲುವಿನಲ್ಲಿ ಭಾನುವಾರ ಸಂಜೆಯ ಭಾರೀ ಮಳೆಗೆ ರಸ್ತೆ ಬದಿಯ ಗುಡ್ಡೆ ಕುಸಿದು ಮರಗಳು ರಸ್ತೆಗೆ ಅಪ್ಪಳಿಸಿ ಸುಮಾರು ಮೂರು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಸಂಜೆ ಸುಮಾರು 6ರ ವೇಳೆ ಗುಡ್ಡೆ ಕುಸಿದಿದ್ದು ರಸ್ತೆಯಲ್ಲಿ ಮಣ್ಣು ತುಂಬಿದೆ.ಮರ ಅಪ್ಪಳಿಸಿದ ರಭಸಕ್ಕೆ ಎಚ್.ಟಿ.ತಂತಿಗೆ ಹಾನಿಯಾಗಿದ್ದು ಬದಿಯಡ್ಕ, ಮುಳ್ಳೇರಿಯ ವಿದ್ಯುತ್ ಕಚೇರಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸಂಪರ್ಕ ವಿಚ್ಛೇದಿಸಿದ್ದಾರೆ. ಗುಡ್ಡೆ ಕುಸಿತದ ವೇಳೆ ವಾಹನ ಅಥವಾ ಪಾದಚಾರಿಗಳು ಹಾದು ಹೋಗದಿರುವುದು ಸಂಭನೀಯ ಅಪಾಯವೊಂದು ತಪ್ಪಿದೆ.ಸುಮಾರು ಮೂರು ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಸ್ಥಳೀಯರು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಯಂತ್ರದ ಸಹಾಯದಿಂದ ಮರಗಳನ್ನು ತುಂಡರಿಸಿ ತೆರವು ಗೊಳಿಸಿದ್ದಾರೆ.ರಾತ್ರಿ 9ರ ವೇಳೆ ಲಘು ವಾಹನಗಳು ಹಾದು ಹೋಗಲು ಸಾಧ್ಯವಾಗಿದೆ. ರಸ್ತೆಯಲ್ಲಿ ಮಣ್ಣು ರಾಶಿ ಬಿದ್ದಿದ್ದು ಜೆಸಿಬಿ ಯಂತ್ರ ಬಳಸಿ ತೆರವು ಗೊಳಿಸಬೇಕಾಗಿದೆ.