ಕೊಚ್ಚಿ: ರಾಜತಾಂತ್ರಿಕ ಸರಂಜಾಮು ಬ್ಯಾಗೇಜ್ ಗಳ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ ಮತ್ತೆ ಪ್ರಶ್ನಿಸುತ್ತಿದೆ. ಅವರನ್ನು ವಿಚಾರಣೆಗಾಗಿ ಕೊಚ್ಚಿಯ ಜಾರಿ ನಿರ್ದೇಶನಾಲಯ ಕಚೇರಿಗೆ ಶನಿವಾರ ಕರೆಸಲಾಯಿತು.
ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಕೊಚ್ಚಿ ತಲುಪಿದ ಎಂ. ಶಿವಶಂಕರ್ ಅವರನ್ನು ಪ್ರಧಾನ ಆರೋಪಿಗಳಾದ ಸ್ವಪ್ನಾ ಸುರೇಶ್, ಸರಿತ್ ಮತ್ತು ಸಂದೀಪ್ ಅವರೊಂದಿಗೆ ಪ್ರಶ್ನಿಸಲು ಇಡಿ ಇನ್ನಷ್ಟು ಸಮಗ್ರ ತನಿಖೆಗೆ ಚಾಲನೆ ನೀಡಿದೆ. ಸಪ್ನಾ ಮತ್ತು ಇತರ ಆರೋಪಿಗಳನ್ನು ಸಂಜೆ 5 ರವರೆಗೆ ವಿಚಾರಣೆ ನಡೆಸಿದ್ದು ಬಳಿಕ ಶಿವಶಂಕರ್ ಅವರನ್ನು ತನಿಖೆಗೊಳಪಡಿಸಲಾಯಿತು.
ಸ್ವಪ್ನಾ ಸುರೇಶ್ ಅವರು ಸಿಎಂ ಕಚೇರಿಯಲ್ಲಿ ಆಂತರಿಕ ವ್ಯವಹಾರಗಳಲ್ಲಿ ಗಮನಾರ್ಹ ಪಾತ್ರವಹಿಸುತ್ತಿದ್ದರು ಎಂದು ಈ ಹಿಂದೆ ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು. ಇದಲ್ಲದೆ, ಕೆಲವು ಮಾಧ್ಯಮ ವರದಿಗಳು ವಿಚಾರಣೆಯ ಸಮಯದಲ್ಲಿ ಸ್ವಪ್ನಾ ಸುರೇಶ್ ಅವರು ಶಿವಶಂಕರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಬಹಿರಂಗಪಡಿಸಿವೆ.
ಇದಕ್ಕೂ ಮೊದಲು ಶಿವಶಂಕರ್ ಅವರನ್ನು ಎನ್‍ಐಎ ಮತ್ತು ಕಸ್ಟಮ್ಸ್ 34 ಗಂಟೆಗಳ ಕಾಲ ಪ್ರಶ್ನಿಸಿತ್ತು. ಶಿವಶಂಕರ್ ಅವರನ್ನು ಕಳೆದ ತಿಂಗಳು ಸತತ ಎರಡು ದಿನಗಳ ಕಾಲ ಕೊಚ್ಚಿಯಲ್ಲಿ ಎನ್ ಐ ಎ ವಿಚಾರಣೆಗೊಳಪಡಿಸಿ ಬಿಡುಗಡೆ ಮಾಡಿತ್ತು.