ಬದಿಯಡ್ಕ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿ-ತೊರೆಗಳು ಉಕ್ಕಿ ಹರಿಯುತ್ತಿದ್ದು ಕುಂಬ್ಡಾಜೆ ಪಂಚಾಯತಿ ವ್ಯಾಪ್ತಿಯ ಆನೆಪಳ್ಳ-ಕುಂಡಾಪು ತೂಗು ಸೇತುವೆ ಹಾಗೂ ಎಣ್ಮಕಜೆ ಪಂಚಾಯತಿ ವ್ಯಾಪ್ತಿಯ ಬಳೆಗಾರಮೂಲೆ-ಕುಂಡಾಪು ಕಾಲ್ಸೇತುವೆ ಮಳೆ ಜಲಸದ್ರೋಣಿಗೆ ಕೊಚ್ಚಿಹೋಗಿದೆ. ದರಿಂದ ಸ್ಥಳೀಯ ನಿವಾಸಿಗಳಿಗೆ ಸಂಚಾರ ಅಡಚಣೆ ಉಂಟಾಗಿದೆ.
ಕುಂಬ್ಡಾಜೆ ಪಂಚಾಯತಿಯ ಆನೆಪಳ್ಳ-ಕುಂಡಾಪು, ತೂಗುಸೇತುವೆ ಏತಡ್ಕದ ಶ್ರೀಸದಾಶಿವ ದೇವಸ್ಥಾನ, ಕುಂಡಾಪು, ಏತಡ್ಕಕ್ಕೆ ಸಂಪರ್ಕ ಕಲ್ಪಿಸುವ ಕಾಲುದಾರಿಗೆ ಸಂಪರ್ಕ ಸೇತುವೆಯಾಗಿತ್ತು. ತೂಗುಸೇತುವೆಯ ಒಂದು ಬದಿ ಕುಸಿದಿದ್ದು ತೂಗುಸೇತುವೆ ನೀರು ಪಾಲಾಗಿದೆ.
ಎಣ್ಮಕಜೆ ಪಂಚಾಯತಿಯ ಬಳೆಗಾರಮೂಲೆ-ಕುಂಡಾಪು ಅಡಿಕೆ ಮರದ ಕಾಲ್ಸೇತುವೆಯ ಒಂದು ಬದಿ ಕುಸಿದು ಸಂಪರ್ಕ ಸಮಸ್ಯೆಗೆ ಕಾರಣವಾಗಿದೆ.