74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಸಲುವಾಗಿ ಭಾರತೀಯ ಪ್ರಜೆಗಳಿಗೆ ಪ್ರತ್ಯೇಕ ಆರೋಗ್ಯ ಗುರುತಿನ ಚೀಟಿ ಹಾಗೂ ಸಂಖ್ಯೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರತ್ಯೇಕ ಹೆಲ್ತ್ ಕಾರ್ಡ್ ಹೊಂದಲಿದ್ದಾರೆ.
ಆತನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಆ ಕಾರ್ಡ್‌ನಲ್ಲಿನ ಹೆಲ್ತ್ ಪ್ರೊಫೈಲ್‌ನಲ್ಲಿ ಇರಲಿದೆ. ಇದರಿಂದ ವೈದ್ಯಕೀಯ ಸೇವೆ ಪಡೆಯಲು ನೆರವಾಗಲಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಇದು ಆಯುಷ್ಮಾನ್ ಭಾರತ್ ಯೋಜನೆ ಮುಂದುವರೆದ ಭಾಗವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲಿದೆ ಎಂದು ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.
ವೈದ್ಯರನ್ನು ಭೇಟಿ ಮಾಡಿದಾಗ ಅಥವಾ ಫಾರ್ಮಸಿಗಳಿಗೆ ಹೋದಾಗ ಈ ಹೆಲ್ತ್ ಐಡಿ ಮೂಲಕ ರೋಗಿಯ ಎಲ್ಲಾ ರೋಗ ಲಕ್ಷಣಗಳು ಹಾಗೂ ಹಿಂದಿನ ವೈದ್ಯಕೀಯ ಇತಿಹಾಸವನ್ನು ತಿಳಿಯಬಹುದಾಗಿದೆ.
ಇದರಿಂದ ಉತ್ತಮ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಮೂಲಕ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಸಾರ್ವಜನಿಕರು ಪ್ರತ್ಯೇಕ ಹೆಲ್ತ್ ಐಡಿಯನ್ನು ಹೊಂದಲಿದ್ದಾರೆ.
ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ, ವೈದ್ಯರಿಗೆ ಈ ಐಡಿಯನ್ನು ನೀಡಿದರೆ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ಹಿನ್ನೆಲೆ ಗೊತ್ತಾಗಲಿದೆ, ಇದರಿಂದ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗುತ್ತದೆ. ರೋಗಿಯ ವೈದ್ಯಕೀಯ ಇತಿಹಾಸದ ಮೂಲಕ ಯಾವ ಚಿಕಿತ್ಸೆ ನೀಡಬಹುದು ಯಾವ ಚಿಕಿತ್ಸೆ ನೀಡಬಾರದು ಎನ್ನುವ ಸ್ಪಷ್ಟತೆ ದೊರೆಯುತ್ತದೆ.
ಭಾರತೀಯರ ವೈಯಕ್ತಿಕ ಮಾಹಿತಿಗಳು ಖಾಸಗಿ ಹಕ್ಕಿನಲ್ಲಿ ಬರುತ್ತೆ ಎಂದು ಆಧಾರ್‌ವಿಚಾರದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ ನಾಗರಿಕರ ಖಾಸಗಿತನ ರಕ್ಷಣೆಯನ್ನು ಹೊರಗಿರಿಸಿಕೊಂಡು ವೈದ್ಯರಿಗೆ ನಿರ್ದಿಷ್ಟ ಸಮಯಕ್ಕೆ ಮಾತ್ರ ರೋಗಿಯ ಹೆಲ್ತ್ ಕಾರ್ಡ್ ಪರಿವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ.
ಈ ಹೆಲ್ತ್ ಕಾರ್ಡ್‌ನ ಪ್ರಮುಖ ಉಪಯೋಗವೆಂದರೆ ಭವಿಷ್ಯದ ಆರೋಗ್ಯ ಕ್ರಾಂತಿಗೆ ಕಾರಣವಾಗಲಿರುವ ಟೆಲಿಮೆಡಿಸಿನ್ ಗೂ ಇದು ಪೂರಕವಾಗಲಿದೆ. ರೋಗಿಗಳು ಈ ಹೆಲ್ತ್ ಕಾರ್ಡ್ ಮೂಲಕ ಟೆಲಿಮೆಡಿಸಿನ್‌ನಲ್ಲಿ ವೈದ್ಯರೊಂದಿಗೆ ಸಂದರ್ಶನ ನಡೆಸಬಹುದಾಗಿದೆ.