ಕಾಸರಗೋಡು: ತನ್ನ ಪುತ್ರಿಯ ವಿವಾಹ ಸಂಬಂಧ ಸಮಾರಂಭಕ್ಕಾಗಿ ಮೀಸಲಿರಿಸಿದ್ದ ಮೊತ್ತದಲ್ಲಿ ಒಂದು ಲಕ್ಷ ರೂ.ವನ್ನು ಮುಖ್ಯಮಂತ್ರಿಯ ವಿಪತ್ತು ನಿವಾರಣೆ ನಿಧಿಗೆ ನೀಡುವ ಮೂಲಕ ದಂಪತಿ ಮಾದರಿಯಾಗಿದ್ದಾರೆ.
ಪರಪ್ಪ ಮುಂಡ್ಯನಂ ನಿವಾಸಿ ಪಿ.ಕೆ.ಬಾಲಕೃಷ್ಣನ್ ದಂಪತಿ ಈ ಕೊಡುಗೆ ನೀಡಿದವರು. ಮಹಾಮಾರಿಕೊರೋನಾ ಮತ್ತು ಬಿರುಸಿನ ಮಳೆಗೆ ಅಪಾರ ನಾಶ-ನಷ್ಟ ಅನುಭಸುತ್ತಿರುವ ರಾಜ್ಯದಲ್ಲಿ ಪರಿಹಾರ ಕ್ರಮಗಳಿಗೆ ಬಳಸುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ಅವರು ಸಲ್ಲಿಸಿದ್ದಾರೆ. ಆ.8 ರಂದು ಇವರ ಪುತ್ರಿ ಕಾವ್ಯಾಕೃಷ್ಣನ್ ಅವರ ವಿವಾಹ ಕರಿಂದಳಂ ಕಾಲಿಚ್ಚಾಮರಂನಿವಾಸಿ ರಂಜಿತ್ ಅವರೊಂದಿಗೆ ನಡೆದಿತ್ತು. ಆಡಂಬರವನ್ನು ಕೈಬಿಟ್ಟು, ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿ, ಸರಳವಾಗಿ ವಿವಾಹ ಸಮಾರಂಭ ನಡೆಸಲಾಗಿತ್ತು. ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪಿ.ಕೆ.ಬಾಲಕೃಷ್ಣನ್ ಮೊತ್ತವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದರು.