ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ ಆರ್ & ಆರ್ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ.
ಪ್ರಣಬ್ ಮುಖರ್ಜಿ ಅವರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರುಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗಾಗಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಾಗಿ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ ತರುವಾಯ ಅವರಿಗೆ ವೆಂಟಿಲೇಟರ್ ಬೆಂಬಲ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಸ್ತ್ರಚಿಕಿತ್ಸೆಗೆ ಮುನ್ನ, ಪ್ರಣಬ್ ಮುಖರ್ಜಿ ಅವರು ಕೋವಿಡ್ -19 ಸೋಂಕು ಪಾಸಿಟಿವ್ ವರದಿ ಪಡೆದಿದ್ದರು. ಇದನ್ನು ಅವರು ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದು ಕಳೆದ 14 ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಜನರು ಪರೀಕ್ಷೆಗೆ ಒಳಪಡಿಸುವಂತೆ ಕೇಳಿಕೊಂಡಿದ್ದರು.
"ಪ್ರತ್ಯೇಕ ಕಾರ್ಯವೊಂದಕ್ಕೆ ಆಸ್ಪತ್ರೆಗೆ ಆಗಮಿಸಿದ್ದ ವೇಳೆ , ನಾನು ಇಂದು ಕೋವಿಡ್ ಪಾಸಿಟಿವ್ ವರದಿ ಪಡೆದಿದ್ದೇನೆ. . ಕಳೆದ ವಾರದಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದ ಜನರೆಲ್ಲರೂ ದಯವಿಟ್ಟು ಸ್ವಯಂ ಕ್ವಾರಂಟೈನ್ ನಲ್ಲಿರುವಂತೆ ಮತ್ತು ಕೋವಿಡ್ 19 ಗಾಗಿ ಪರೀಕ್ಷೆ ಮಾಡಿಸಿಕೊಳ್ಲಲು ನಾನು ವಿನಂತಿಸುತ್ತೇನೆ" ಎಂದು ಮುಖರ್ಜಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಇತ್ತ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಣಬ್ ಮುಖರ್ಜಿ ಪುತ್ರ ಶರ್ಮಿಸ್ತಾ ಮುಖರ್ಜಿ ಜತೆ ಮಾತನಾಡಿ ಪ್ರಣಬ್ ಮುಖರ್ಜಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಮುಖರ್ಜಿ ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಮತ್ತು ಉತ್ತಮ ಆರೋಗ್ಯ ಪಡೆಯಲೆಂದು ಕೋವಿಂದ್ ಹಾರೈಸಿದ್ದಾರೆ.