ಕಾಸರಗೋಡು: 'ವಿಮಾನ ಭೂ ಸ್ಪರ್ಶದ ಕೊನೆಯ ಘಳಿಗೆಯಲ್ಲಿದ್ದಾಗ ಏನೋ ಆಗಬಾರದ್ದು ಆಗುತ್ತಿದೆ ಎಂದು ತೋರುತು. ಮತ್ತು ವಿಮಾನವು ಇದ್ದಕ್ಕಿದ್ದಂತೆ ಮೇಲಕ್ಕೆ ಮತ್ತು ಕೆಳಕ್ಕೆ ಹೋಗುವುದು ಬಳಿಕ ಇದ್ದಕ್ಕಿದ್ದಂತೆ ಕೆಳಗೆ ಬೀಳುವುದು ನನಗೆ ನೆನಪಿದೆ ಎಂದು ಕರಿಪ್ಪೂರ್ ವಿಮಾನ ದುರಂತದಲ್ಲಿ ಬದುಕುಳಿದ ಕಾಸರಗೋಡು ಕುಣಿಯದ ಅಬ್ದುಲ್ ರಫಿ ಅವರ ಮಾತುಗಳು ಇವು. ಶನಿವಾರ ಬೆಳಿಗ್ಗೆ ಕುಟುಂಬದೊಂದಿಗೆ ಕುಣಿಯಕ್ಕೆ ಆಗಮಿಸಿದಾಗಷ್ಟೇ ಬದುಕುಳಿದ ಭರವಸೆಯಲ್ಲಿ ನಿರಾಳನಾಗಿರುವೆ ಎಂದು ಎಂದು ರಫಿ ಹೇಳಿದರು.
ಶಾರ್ಜಾದ ಖಾಸಗಿ ವಿಮಾ ಕಂಪನಿಯ ಉದ್ಯೋಗಿ ಅಬ್ದುಲ್ ರಫಿ ಎ. ಹಮೀದ್ (39) ಮತ್ತು ಅವರ ಪತ್ನಿ ಆಶತ್ ಸಲೀನಾ, ಮಕ್ಕಳಾದ ಅಬ್ದುಲ್ಲಾ ರಿಹಾನ್(10) ಮತ್ತು ಅಬ್ದುಲ್ಲಾ ಶೆಹ್ರಾನ್ (4) ಅಪಘಾತದಿಂದ ಬದುಕುಳಿದರು. ಎಲ್ಲರೂ ವಿಮಾನದ ಮಧ್ಯದ ಆಸನದಲ್ಲಿ ಕುಳಿತಿದ್ದರು. ಅಪಘಾತದ ಸಮಯದಲ್ಲಿ ರಫಿ ತನ್ನ ಮೊಬೈಲ್ ಮತ್ತು ಇತರ ಲಗೇಜುಗಳನ್ನು ಕಳೆದುಕೊಂಡರು. ಅಪಘಾತದ ಬಳಿಕ ಆರೋಗ್ಯ ಕಾರ್ಯಕರ್ತರು ಕೊಂಡೋಟ್ಟಿಯ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಷ್ಟೇ ಆಗಿರುವುದು ದೈವ ಸಹಾಯದಿಂದ ಎಂದು ಆಗಸದತ್ತ ಮುಖಮಾಡಿ ಕೃತಾರ್ಥತೆ ಪ್ರಕಟಿಸಿದರು.
ಅಪಘಾತದ ಮಾಹಿತಿ ತಿಳಿಯುತ್ತಿರುವಂತೆ ರಫಿಯ ತಂದೆ ಕಲ್ಲಿಂಗಲ್ ಅಬ್ದುಲ್ ಹಮೀದ್ ಶುಕ್ರವಾರ ರಾತ್ರಿಯೇ ವಾಹನದಲ್ಲಿ ಕರಿಪ್ಪೂರ್ ಗೆ ಧಾವಿಸಿದ್ದರು. ಹೆಚ್ಚುಕಮ್ಮಿ ಪುತ್ರ ಹಾಗೂ ಸೊಸೆ ಮೊಮ್ಮಕ್ಕಳು ಬದುಕಿರುವ ಬಗ್ಗೆ ಸಂಪೂರ್ಣ ಭರವಸೆ ಕಳಕೊಂಡಿದ್ದರು. ಆದರೂ ಪ್ರಾರ್ಥನೆಯನ್ನು ಕೈಬಿಡಲಿಲ್ಲ. ದೇವರು ಮೊರೆ ಕೇಳಿಸಿ ಹರಸಿದ ಎಂದು ವೃದ್ದ ಮಾತಾಪಿತೃಗಳ ಕಣ್ಣು ತೇವಗೊಂಡದ್ದು ಮನಕಲಕುವಂತಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಗಲ್ಪ್ ರಾಷ್ಟ್ರದ ಉದ್ಯೋಗ ಕಳೆದುಕೊಂಡ ಕಾರಣ ರಫಿ ಮತ್ತು ಅವರ ಕುಟುಂಬ ಮನೆಗೆ ಮರಳಲು ತಯಾರಿ ನಡೆಸಿತ್ತು. ಟಿಕೆಟ್ ಪಡೆಯಲು ತಡವಾಗಿರುವುದರಿಂದ ಶುಕ್ರವಾರ ತಾಯ್ನಾಡಿಗೆ ಮರಳಲು ಟಿಕೇಟ್ ಲಭ್ಯವಾಗಿತ್ತು. ಅವರು ಎರಡು ವರ್ಷಗಳಿಂದ ಕುಟುಂಬದೊಂದಿಗೆ ಶಾರ್ಜಾದಲ್ಲಿ ವಾಸಿಸುತ್ತಿದ್ದರು. ಅಪಘಾತದ ಸಮಯದಲ್ಲಿ ಮೊಬೈಲ್ ಫೆÇೀನ್ ಮತ್ತು ಸಾಮಾನು-ಸರಂಜಾಮುಗಳ ಎಲ್ಲಾ ಬ್ಯಾಗ್ ಗಳನ್ನೂ, ಪಾಸ್‍ಪೋರ್ಟ್ ಮೊದಲಾದ ದಾಖಲೆಗಳನ್ನು ಕಳೆದುಕೊಂಡಿದ್ದರೂ ಈಗ ಅವಕ್ಕಿಂತಲೂ ಮಿಕ್ಕಿದ ದೊಡ್ಡ ಬದುಕೆಂಬ ಆಸ್ತಿ ಉಳಿದುಕೊಂಡಿರುವ ಬಗ್ಗೆ ರಫಿ ನಿಟ್ಟುಸಿರು ಬಿಡುತ್ತಾರೆ.