ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ ವಾರ್ಡು ನಂಬರ್ 11 ಕೊಣಿಬೈಲು ವಾರ್ಡಿನ ಮುಗುಳಿ- ಸೊಡಂಕೂರು ರಸ್ತೆಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಸಭೆಯ ಅಧ್ಯಕ್ಷ ತೆ ಯನ್ನು ವರ್ಕಾಡಿ ಪಂಚಾಯತಿ ಬಿಜೆಪಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಿಜೆಪಿ ಮಂಡಲ ಸಮಿತಿ ಸದಸ್ಯ, ಬ್ಲಾಕ್ ಪಂಚಾಯತಿ ಸದಸ್ಯರಾದ ಸದಾಶಿವ ಯು. ಅವರು
ಮಂಜೂರಾದ ಕಾಂಕ್ರೀಟ್ ರಸ್ತೆಯ ಮುಂಗಡ ಹಣವು ಏ.16 ಮತ್ತು 22 ರ ದಿನಾಂಕಗಳಂದು ಒಟ್ಟು ಮೊತ್ತ 96,720.00 ಪಡೆದಿರುತ್ತಾರೆ. ರಸ್ತೆಯ ಕಾಮಗಾರಿಗೆ. ಇದುವರೆಗೂ ಪ್ರಾರಂಭಗೊಂಡಿಲ್ಲ. ಮಂಜೂರಾದ ಒಟ್ಟು ಮೊತ್ತ -4,92000.00 ಆಗಿದೆ. ಕಾಮಗಾರಿ ಮುಗಿಯುವ ಮೊದಲೇ ಬಿಲ್ ಬರೆದಿರುವುದು ಭ್ರಷ್ಟಾಚಾರ ನಡೆಸಲು ಎಂಬ ಅನುಮಾನ ಇದೆ ಎಂದು ಆರೋಪಿಸಿದರು. ಇದರ ಕುರಿತು ತನಿಖೆ ಆಗಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಮುಂಗಡ ಹಣ ಕೊಡುವ ಕ್ರಮ ಇಲ್ಲ. ಹಾಗಾದರೆ ಮುಂಗಡ ಹಣ ಹೇಗೆ ಮಂಜೂರುಗೊಳಿಸಿರುವರು ಎಂಬ ಬಗ್ಗೆ ಅವರು ಪ್ರಶ್ನಿಸಿದರು.
ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಇದರಲ್ಲಿ ಪಂಚಾಯತಿ ಅಧ್ಯಕ್ಷರು, ಪಂಚಾಯತಿ ಕಾರ್ಯದರ್ಶಿ, ವಾರ್ಡ್ ಸದಸ್ಯೆ ಮತ್ತುಉದ್ಯೋಗ ಖಾತರಿ ಯೋಜನೆ ಉದ್ಯೋಗಸ್ಥರನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ತೆಗೆದುಕೊಳ್ಳ ಬೇಕು ಎಂದು ಒತ್ತಾಯಿಸಿದರು. ಸಕಾಲಕ್ಕೆ ಬಿಜೆಪಿ ಪ್ರತಿನಿಧಿಗಳು ಪಂಚಾಯತಿ ಅಧಿಕಾರಿಗಳನ್ನು ಎಚ್ಚರಿಸದೆ ಇರುತ್ತಿದ್ದರೆ ಎಲ್ಲಾ ಹಣ ವನ್ನು ಲಪಟಾಯಿಸುವ ಹುನ್ನಾರದಲ್ಲಿ ಇರುತ್ತಿದ್ದರು. ಜನರನ್ನು ವಂಚಿಸುವ ಆಡಳಿತ ಪಕ್ಷ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ವಾರ್ಡ್ ನ ಸಿಪಿಎಂ ಪ್ರತಿನಿಧಿ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು.