ಬೆಂಗಳೂರು: ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸ ಹೊಂದಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಅನಂತಕುಮಾರ್ ಪ್ರತಿಷ್ಠಾನ ನಗರದಲ್ಲಿ ಆಯೋಜಿಸಿದ್ದ ದೇಶ ಮೊದಲು ವೆಬಿನಾರ್ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಕೋವಿಡ್ ಸೋಂಕನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುತ್ತಾ ಬಂದಿದೆ.
ಸೋಂಕು ದೇಶಕ್ಕೆ ಕಾಲಿಡುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದರು. ಫೆಬ್ರವರಿ ಮೊದಲ ವಾರದಲ್ಲಿ ಕೇವಲ ಪುಣೆಯಲ್ಲಿ 1 ಪ್ರಯೋಗಾಲಯ ಇದ್ದದ್ದು ಇಂದು 1582ಕ್ಕೆ ಹೆಚ್ಚಾಗಿದೆ. 1000 ಕ್ಕೂ ಹೆಚ್ಚು ಸರಕಾರಿ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದು, ಇದೀಗ ಪ್ರತಿದಿನ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.
ಕೋವಿಡ್ ಪ್ರಾರಂಭದ ಸಮಯದಲ್ಲಿ ಪಿಪಿಇ ಕಿಟ್ ಗಳು, ಎನ್ 95 ಮಾಸ್ಕ್ ಗಳು ಹಾಗೂ ವೆಂಟಿಲೇಟರ್ ಗಳ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಪ್ರಸ್ತುತ ಪ್ರತಿ ದಿನ 5 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡಲಾಗುತ್ತಿದೆ.
ದೇಶದ 10 ಜನ ಉತ್ಪಾದಕರು ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ, 25 ಉತ್ಪಾದಕರು ವೆಂಟಿಲೇಟರ್ ಗಳನ್ನು ತಯಾರಿಸುತ್ತಿದ್ದಾರೆ. ಇದೀಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಪಿಪಿಇ ಕಿಟ್ ಗಳು, ಎನ್ 95 ಹಾಗೂ ವೆಂಟಿಲೇಟರ್ ಗಳ ಕೊರತೆ ನೀಗಿದೆ ಎಂದು ಹೇಳಿದರು.