ಬದಿಯಡ್ಕ: ಚೆರ್ಕಳ ಕಲ್ಲಡ್ಕ ಅಂತರ್ ರಾಜ್ಯ ರಸ್ತೆಯ ಕರಿಂಬಿಲದಲ್ಲಿ ಗುಡ್ಡವು ಮತ್ತೆ ಕುಸಿಯಲಾರಂಭಿಸಿದ್ದರೂ ಅಧಿಕಾರಿಗಳ ಬೇಜವಾಬ್ದಾರಿತನವು ಕಳೆದ ಬಾರಿಯಂತೆ ಈ ಬಾರಿಯೂ ಮುಂದುವರಿದಿರುವುದು ಖಂಡನೀಯ. ಗುಡ್ಡಕುಸಿತದ ಪ್ರದೇಶದಲ್ಲಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಅಧಿಕಾರಿಗಳು ಮುಂದೆ ಬರಬೇಕೆಂದು ಯುವಮೋರ್ಚಾ ಆಗ್ರಹಿಸುತ್ತಿದೆ. ಸಮಸ್ಯೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ರಸ್ತೆತಡೆಯುಂಟಾಗದಂತೆ ಜಾಗ್ರತೆ ವಹಿಸಲು ಅಧಿಕಾರಿಗಳು ಮುಂದೆಬರದಿದ್ದಲ್ಲಿ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಯುವಮೋರ್ಚಾ ಕಾಸರಗೋಡು ಮಂಡಲಾಧ್ಯಕ್ಷ ರಕ್ಷಿತ್ ಕೆದಿಲಾಯ ಬದಿಯಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೆರ್ಕಳ ಕಲ್ಲಡ್ಕ ಅಂತರ್ ರಾಜ್ಯ ರಸ್ತೆ ಅಭಿವೃದ್ದಿಯ ಸಂದರ್ಭದಲ್ಲಿ ಅವೈಜ್ಞಾನಿಕವಾದ ರೀತಿಯಲ್ಲಿ ರಸ್ತೆ ಬದಿಯನ್ನು ಅಗಲಗೊಳಿಸಿದ ಪರಿಣಾಮವಾಗಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದು ಸುಮಾರು ಒಂದು ತಿಂಗಳ ಕಾಲ ಅಂತಾರಾಜ್ಯ ಸಂಚಾರ ಮೊಟಕುಗೊಂಡಿತ್ತು. ನಂತರ ಕುಸಿದ ಗುಡ್ಡದ ಮಣ್ಣನ್ನು ತೆಗೆದು ನೂತನವಾಗಿ ಡಾಮರೀಕರಣ ಮಾಡಲಾಗಿತ್ತು. ಈ ಬಾರಿ ಕೂಡ ಗುಡ್ಡದ ಮಣ್ಣು ಜರಿದು ದಿನದಿಂದ ದಿನಕ್ಕೆ ರಸ್ತೆಯನ್ನು ಆವರಿಸುತ್ತಿದೆ. ಮಳೆಯ ನೀರು ಹರಿಯುಲು ಸಮರ್ಪಕವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ಹಾದುಹೋಗುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಬಸ್ ಸಂಚಾರ ಇಲ್ಲದಿರುವುದರಿಂದ ಜನತೆಗೆ ಹೆಚ್ಚಿನ ತೊಂದರೆಗಳು ಉಂಟಾಗಿಲ್ಲ. ಕಾಸರಗೋಡು ಜಿಲ್ಲೆಯ ಪ್ರಮುಖ ಕೋವಿಡ್ ಆಸ್ಪತ್ರೆಯಲ್ಲಿ ಒಂದಾದ ಉಕ್ಕಿನಡ್ಕ ಸರಕಾರಿ ಮೆಡಿಕಲ್ ಕಾಲೇಜಿಗೆ ಸಂಚರಿಸುವ ರಸ್ತೆ ಇದಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದು ವೇಳೆ ಗುಡ್ಡ ಜರಿದು ರಸ್ತೆಗೆ ಬಂದರೆ ತುರ್ತು ಸಂಚಾರಕ್ಕೂ ಅಡೆಚಣೆ ಉಂಟಾಗಲಿದೆ. ಪ್ರತಿ ಬಾರಿಯೂ ಇಂತಹ ಘಟನೆ ಗಳು ಆವರ್ತಿಸುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಕೂಡಲೇ ಈ ಸಮಸ್ಯೆಗೆ ಸ್ಪಂದಿಸಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡದಿದ್ದರೆ ಯುವಮೋರ್ಚಾ ಉಗ್ರ ಹೋರಾಟವನ್ನು ಕೈಗೊಳ್ಳಲಿದೆ. ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಿ ಗುಡ್ಡ ಕುಸಿತಕ್ಕೆ ಕಾರಣಕರ್ತರಾದವರ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಶೀಘ್ರವೇ ಕಠಿಣ ಕ್ರಮಕೈಗೊಳ್ಳಬೇಕೆಂದು ಯುವ ಮೋರ್ಚಾ ಕಾಸರಗೋಡು ಮಂಡಲ ಆಗ್ರಹಿಸುತ್ತದೆ ಎಂದು ಅವರು ತಿಳಿಸಿದರು.