ಉಪ್ಪಳ: ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಎಂಬಲ್ಲಿ ಮಾನಸಿಕ ಅಸ್ವಸ್ಥನೆಂದು ಗುರುತಿಸಲ್ಪಟ್ಟ ಉದಯ ಎಂಬಾತ ತನ್ನ ಸೋದರ ಮಾವಂದಿರು ಹಾಗೂ ಅತ್ತೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈಯ್ಯಲು ಕಾರಣ ಕೋವಿಡ್ ಕಾರಣದ ಅತಂತ್ರತೆ ಎನ್ನುವುದು ಇದೀಗ ಹೊರಬಿದ್ದಿದೆ.
ಉದಯ ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಾನಸಿಕ ವಿಭಾಗದ ನಿರಂತರ ಚಿಕಿತ್ಸೆಯಲ್ಲಿದ್ದನು. ಯಾವುದೇ ದುರಾಭ್ಯಾಸಗಳಿಲ್ಲದ ಈತ ಕೂಲಿ ಕೆಲಸಗಳಲ್ಲಿ ನಿಷ್ಠಾತನಾಗಿದ್ದು ಎಲ್ಲರ ಮೆಚ್ಚುಗೆಯ ವ್ಯಕ್ತಿಯಾಗಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಎಳವೆಯಿಂದಲೇ ತಂದೆಯನ್ನು ಕಳಕೊಂಡಿದ್ದ ಉದಯ ತಾಯಿಯೊಂದಿಗೆ ಮಾವಂದಿರ ಮನೆಯಲ್ಲಿ ವಾಸಿಸುತ್ತಿದ್ದ.
ಈ ಮಧ್ಯೆ ಕೋವಿಡ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕಾಸರಗೋಡು ಸಂಪರ್ಕ ನಿಯಂತ್ರಿಸಲ್ಪಟ್ಟು ಕಳೆದ ಹಲವು ತಿಂಗಳುಗಳಿಂದ ಔಷಧಿಗಳು ಲಭ್ಯವಾಗಿರಲಿಲ್ಲ. ಮಂಗಳೂರಿಗೆ ತೆರಳಲು ಅಸಾಧ್ಯವಾಗಿರುವುದರಿಂದ ಸಕಾಲಕ್ಕೆ ಔಷಧಿ ಪೂರೈಕೆಯಾಗದೆ ಇತ್ತೀಚೆಗಿನ ಕೆಲವು ವಾರಗಳಿಂದ ಉದಯನ ಮನಸ್ಸು ಪ್ರಕ್ಷುಬ್ದಗೊಂಡಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ಉದಯ ತಾನು ಮದುವೆಯಾಗಬೇಕೆಂಬ ಬೇಡಿಕೆಯನ್ನೂ ಮಾವಂದಿರ ಬಳಿ ಇರಿಸಿದ್ದು ಈ ಕಾರಣಗಳಿಂದ ಮನೆಯಲ್ಲಿ ನಿತ್ಯ ವಾಕ್ ಯುದ್ದಗಳಾಗುತ್ತಿದ್ದೆಂದು ತಿಳಿದುಬಂದಿದೆ. ಮತ್ತಷ್ಟು ಕುಪಿತಗೊಂಡ ಈತ ಮನೆಯಲ್ಲಿ ಆಹಾರವನ್ನು ಸೇವಿಸದೆ ಪೇಟೆಗೆ ತೆರಳಿ ಹೋಟೆಲ್ ಗಳಲ್ಲಿ ಆಹಾರ ಸೇವಿಸುತ್ತಿದ್ದ. ಔಷಧಿಗಳಿಲ್ಲದೆ ತೀವ್ರ ಪ್ರಕ್ಷುಬ್ದ ಮನಸ್ಸಿನ ಉದಯನ ಒಳ ಬೇಗುದಿಗಳು ಯಾರ ಗಮನಕ್ಕೂ ಬಂದಿರಲಿಲ್ಲ. ಈ ಮಧ್ಯೆ ಸೋಮವಾರ ರಾತ್ರಿ ಮಾತಿಗೆ ಮಾತು ಬೆಳೆದು ಕೊಲೆಗಳ ಸರಮಾಲೆಯಲ್ಲಿ ಪರ್ಯವಸಾನಗೊಂಡಿತು.
ಉದಯ ತನ್ನ ಮಾವಂದಿರಾದ ಸದಾಶಿವ, ವಿಠಲ, ಬಾಬು, ಅತ್ತೆ ದೇವಕಿ ಅವರನ್ನು ಕಡಿದು ಕೊಲೆಗೈದಿದ್ದ. ಉದಯನ ತಾಯಿ ಲಕ್ಷ್ಮೀ ಓಡಿ ಪ್ರಾಣಾಪಾಯದಿಂದ ಪಾರಾದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಾಥಮಿಕ ಸೌಕರ್ಯ ನಿರ್ವಹಿಸದ ಇಲಾಖೆಗಳು:
ಕೋವಿಡ್ ಹಿನ್ನೆಲೆಯಲ್ಲಿ ಮಂಗಳೂರಿನ ಸಂಪರ್ಕ ಕಳೆದುಕೊಂಡು ಜಿಲ್ಲೆಯಲ್ಲಿ ಈಗಾಗಲೇ 13 ರಷ್ಟು ಮಂದಿ ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟಿರುವರು. ಸ್ಥಳೀಯ ಆರೋಗ್ಯ ಇಲಾಖೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಪರಿಧಿಯಲ್ಲಿ ಆರೋಗ್ಯ ಕ್ಷೇತ್ರಗಳಂತಹ ಅಗತ್ಯ ಕ್ಷೇತ್ರಗಳಲ್ಲಿ ಸರಿಯಾದ ಮಾರ್ಗದರ್ಶಿತ್ವಗಳಿಲ್ಲದೆ ಅದೆಷ್ಟೋ ಮಂದಿ ಇದೀಗ ತೀವ್ರ ಸಂಕಷ್ಟಕ್ಕೊಳಗಾಗಿರುವುದು ಒಂದೊಂದಾಗಿ ಬಯಲಾಗುತ್ತಿದೆ. ಕನಿಷ್ಠ ತಮ್ಮ ವ್ಯಾಪ್ತಿಯ ಜನರ ಆರೋಗ್ಯ ಕ್ಷೇತ್ರದ ಮ್ಯಾಪಿಂಗ್, ಎಲ್ಲೆಲ್ಲಿ ಯಾರ್ಯಾರು ಏನು ಚಿಕಿತ್ಸೆ ಪಡೆಯುತ್ತಿದ್ದಾರೆಂಬ
ಅಂಕಿಅಂಶಗಳು ಇಲ್ಲದಿರುವುದು ಉದಯನಂತಹ ಅನೇಕರು ಕ್ಷೋಭೆಗೊಳಗಾಗಿ ಆ ಕಾರಣ ಏನೂ ತಪ್ಪೆಸಗದ ನಾಲ್ವರ ಅಂತ್ಯಕ್ಕೆ ಕಾರಣವಾಗಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಎಂಬ ಮಾತುಗಳು ಕೇಳಿಬಂದಿದೆ.