ತಿರುವನಂತಪುರ: ಕೇರಳ ಕಾಂಗ್ರೆಸ್ ಜೋಸ್ ಕೆ ಮಣಿ ಬಣವನ್ನು ಯುಡಿಎಫ್ ನಿಂದ ಹೊರಹಾಕಲು ಮುಸ್ಲಿಂ ಲೀಗ್ ಒಪ್ಪಿಗೆಯೊಂದಿಗೆ, ಸೆಪ್ಟೆಂಬರ್ 3 ರಂದು ನಡೆಯಲಿರುವ ಯುಡಿಎಫ್ ನಾಯಕತ್ವ ಸಭೆ ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಆರ್.ಎಸ್.ಪಿ ಸೇರಿದಂತೆ ಇತರ ಪಕ್ಷಗಳು ಜೋಸ್ ಬಣದ ವಿರುದ್ಧ ಕಾಂಗ್ರೆಸ್ ನಿಲುವಿಗೆ ಅನುಗುಣವಾಗಿ ಬೆಂಬಲ ನೀಡಿದೆ. ಯುಡಿಎಫ್ ನಾಯಕರು ಇನ್ನು ಯಾವ ಕಾರಣಕ್ಕೂ ಜೋಸ್ ಬಣದೊಂದಿಗೆ ರಾಜಿ ಮಾತುಕತೆ ನಡೆಸುವುದಿಲ್ಲ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಮಲಪ್ಪುರಂ ಗೆ ಆಗಮಿಸಿದ್ದ ಪ್ರತಿಪಕ್ಷ ನಾಯಕ ಚೆನ್ನಿತ್ತಲ ಅವರು ಪಾಣಕ್ಕಾಡ್ ಹೈದರಲಿ ತಂಙಳ್ ಅವರೊಂದಿಗೆ ವಿಸ್ಕøತ ಚರ್ಚೆ ನಡೆಸಿದ್ದರು. ಪಿ.ಕೆ.ಕುಞ್ಞಲಿಕುಟ್ಟಿ ಅವರ ಸಮ್ಮುಖದಲ್ಲಿ ಚರ್ಚೆ ನಡೆಯಿತು. ಈ ಸಭೆಯಲ್ಲಿಯೇ ಕೇರಳ ಕಾಂಗ್ರೆಸ್ ಜೋಸ್ ಬಣವನ್ನು ಕೈಬಿಡಲು ಯಾವುದೇ ಆಕ್ಷೇಪವಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿತು.
ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗುತ್ತಿರುವುದರಿಂದ, ಯುಡಿಎಫ್ ನೊಳಗೆ ಯಾವುದೇ ಭಿನ್ನಾಬಿಪ್ರಾಯಕ್ಕೆ ಆಸ್ಪದವೀಯಲು ಅವಕಾಶ ನೀಡಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಕೇರಳ ಕಾಂಗ್ರೆಸ್ಸ್ ನ ಯಾವುದಾದರೊಂದು ವಿಭಾಗವನ್ನು ಮಾತ್ರ ಯುಡಿಎಫ್ ಬಣದಲ್ಲಿ ಮುಂದುವರಿಯಲು ಅವಕಾಶವೊದಗಿಸುವುದು ಹಿತವೆಂದು ಕಾಂಗ್ರೆಸ್ ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಈ ಮೂಲಕ ನಾಯಕರುಗಳ ಆಸಕ್ತಿ ಜೋಸೆಫ್ ಬಣಕ್ಕೆ ಎಂಬುದು ಇದೀಗ ನಿಖರಗೊಂಡಿದೆ.
ಕೊಟ್ಟಾಯಂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕೂಡ ಜೋಸ್ ಕೆ.ಮಣಿ ಮರಳಿ ಸೇರ್ಪಡೆಗೆ ಮುಂದುವರಿಯಲು ಬಯಸುವುದಿಲ್ಲ. ಯುಡಿಎಫ್ ನಿಂದ ಬರುವವರನ್ನು ಸ್ವೀಕರಿಸುತ್ತೇವೆ ಎಂಬ ಸಿಪಿಎಂ ರಾಜ್ಯ ಕಾರ್ಯದರ್ಶಿಗಳ ಮಾತು ವ್ಯರ್ಥವಾಗಿಲ್ಲ. ಮತ್ತು ಜೋಸ್ ಬಣ ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಅನೇಕ ಕಾಂಗ್ರೆಸ್ ನಾಯಕರು ನಂಬಿದ್ದಾರೆ.
ಸಾಮಾನ್ಯವಾಗಿ ಮಣಿ ಸಮುದಾಯದ ಮುಖಂಡರೊಂದಿಗೆ ಸಾಫ್ಟ್ ಕಾರ್ನರ್ ಸಂಬಂಧವನ್ನು ಹೊಂದಿರುವ ಉಮ್ಮನ್ ಚಾಂಡಿ ಈ ಬಾರಿ ಸಮಾಲೋಚನಾ ಚರ್ಚೆಗೆ ಬಂದಿಲ್ಲ ಎಂಬುದು ಗಮನಾರ್ಹ.
ಯಾವುದೇ ಸಂದರ್ಭದಲ್ಲಿ, ಜೋಸ್ ಬಣವು ಯುಡಿಎಫ್ ಗೆ ಮರಳಲು ಬಯಸಿದರೆ, ಅವರು ಉಪಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಷರತ್ತುಗಳೊಂದಿಗೆ ಹೆಚ್ಚಿನ ಚರ್ಚೆ ನಡೆಸದಿರಲು ಕಾಂಗ್ರೆಸ್ ನಿರ್ಧರಿಸಿದೆ.