ಬದಿಯಡ್ಕ: ಮನೆಯೊಳಗೆ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಗೆ ಶಾಲು ಸಿಲುಕಿ ಮೃತಪಟ್ಟ ದುರ್ದೈವಕರ ಘಟನೆ ಶುಕ್ರವಾರ ನೆಲ್ಲಿಕಟ್ಟೆಯಲ್ಲಿ ನಡೆದಿದೆ.
ನೆಲ್ಲಿಕಟ್ಟೆ ಬಿಲಾಲ್ ನಗರದ ಮೊಹಮ್ಮದ್ ನಾಸರ್ ಮತ್ತು ಫೌಜಿಯಾ ದಂಪತಿಗಳ ಪುತ್ರಿ ಫಾತಿಮಾ ನೌಫಿಯಾ (10) ಮೃತ ದುರ್ದೈವಿ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮನೆಯ ಮುಂಭಾಗದಲ್ಲಿರುವ ಸೀಲಿಂಗ್ ಫ್ಯಾನ್ ಗೆ ಮಾಡಿದ ಕೊಕ್ಕೆ ಮೇಲೆ ಶಾಲು ನೇತುಹಾಕಿ ಉಯ್ಯಾಲೆಯಂತೆ ಆಟವಾಡುತ್ತಿದ್ದಳು. ಸಂಜೆ ಏಕಾಂಗಿಯಾಗಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕತ್ತಿಗೆ ಬಟ್ಟೆ ಸಿಲುಕಿ ಮೃತಪಟ್ಟಳು. ಈ ಸಂದರ್ಭ ತಾಯಿ ಅಡುಗೆಮನೆಯಲ್ಲಿದ್ದು ಘಟನೆ ಅರಿವಿಗೆ ಬರುವಾಗ ಕೈಮೀರಿತ್ತು. ಬಾಲಿಕಿಯ ತಂದೆ ಮಸೀದಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಅರ್ಧ ಘಂಟೆಯ ಬಳಿಕ ತಾಯಿಗೆ ಮಗಳ ಕುತ್ತಿಗೆಗೆ ಶಾಲು ಸಿಲುಕಿರುವುದು ಅರಿವಿಗೆ ಬಂತೆನ್ನಲಾಗಿದೆ.
ಬಾಲಕಿಯನ್ನು ಬಳಿಕ ಚೆಂಗಳದ ಖಾಸಗೀ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ನೌಫಿಯಾ ಅಂಡ್ರುಕುಳಿ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿ. ತಂದೆ, ತಾಯಿ, ಮೂವರು ಸಹೋದರಿಯರು, ಸಹೋದರ ಸಹಿತ ಬಂಧುಗಳನ್ನು ಅಗಲಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿರುವರು.