ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡೆದ ತಡರಾತ್ರಿ ಬೆಳವಣಿಗೆಯಲ್ಲಿ ಲೆಫ್ಟಿನೆಂಟ್ ಗೌರ್ನರ್ ಗಿರೀಶ್ ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸದಾಗಿ ರಚನೆಗೊಂಡ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಮೊದಲ ಲೆಫ್ಟಿನೆಂಟ್ ಗೌರ್ನರ್ ಆಗಿ 2019 ರ ಅಕ್ಟೋಬರ್ 25 ರಂದು ಗಿರೀಶ್ ಮುರ್ಮು ನೇಮಕಗೊಂಡಿದ್ದರು. ಒಂದು ವರ್ಷ ಅವಧಿಪೂರ್ಣಗೊಳಿಸುವುದಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಾಂವಿಧಾನಿಕ ಹುದ್ದೆಯಾದ ಸಿಎಜಿ ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ 65 ವರ್ಷ ಪೂರ್ಣಗೊಳ್ಳಲಿದ್ದು ಅವರ ಅವಧಿಯೂ ಈ ವಾರ ಪೂರ್ಣಗೊಳ್ಳಲಿದೆ. ಸಂದರ್ಭದಲ್ಲೇ ಮುರ್ಮು ರಾಜೀನಾಮೆ ನೀಡಿದ್ದಾರೆ.
ರಾಜೀವ್ ಮೆಹ್ರಿಷಿ ಅವರಿಗೆ ಆ.08 ಕ್ಕೆ 65 ವರ್ಷ ಪೂರ್ಣಗೊಳ್ಳಲಿದ್ದು ಸರ್ಕಾರ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ತ್ವರಿತವಾಗಿ ನೇಮಕ ಮಾಡಬೇಕಿದೆ ಎಂದು ಸಚಿವ ಸಂಪುಟದಲ್ಲಿರುವ ಹಿರಿಯ ಸಚಿವರೊಬ್ಬರು ಎನ್ ಡಿಟಿವಿಗೆ ಮಾಹಿತಿ ನೀಡಿದ್ದಾರೆ.
ಮುರ್ಮು ಅವರು ನರೇಂದ್ರ ಮೋದಿ ಗುಜರಾತ್ ನ ಸಿಎಂ ಆಗಿದ್ದಾಗ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.