ಕುಂಬಳೆ: ದೈನಂದಿನ ಉದ್ಯೋಗಕ್ಕಾಗಿ ಗಡಿನಾಡು ಕಾಸರಗೋಡಿನಿಂದ ಕರ್ನಾಟಕ ಆಶ್ರಯಿಸುವವರು ಕಡ್ಡಾಯ ಪಿಟಿ ಪಿಸಿಆರ್ ಟೆಸ್ಟ್ ನಡೆಸಬೇಕೆಂಬ ಕಾಸರಗೋಡು ಜಿಲ್ಲಾಡಳಿತದ ಆದೇಶ ತುಘ್ಲಕ್ ನೀತಿಯಾಗಿದ್ದು, ಗಡಿನಾಡ ಜನರಿಗಿದು ಗಾಯದ ಮೇಲೆ ಬರೆ ಎಳೆದ ನೋವಿನ ಸ್ಥಿತಿ ತಂದೊಡ್ಡಿದೆ. ಆರೋಗ್ಯ ಸುರಕ್ಷೆಯ ಹೆಸರಲ್ಲಿ ಅಮಾನವೀಯ ಆದೇಶ ನೀಡುವ ಬದಲು ಮಾನವೀಯ ನೆಲೆಯಲ್ಲಿ ಜಿಲ್ಲಾಡಳಿತ ಯೋಚಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬ್ಳೆ ಒತ್ತಾಯಿಸಿದ್ದಾರೆ.
ದೈನಂದಿನ ಕರ್ನಾಟಕ ಆಶ್ರಯಿಸುವ ಗಡಿನಾಡಿಗರಿಗೆ ಈ ಮೊದಲು ಆಂಟಿಜೆನ್ ಟೆಸ್ಟ್ ಮಾಡಿಸಬೇಕೆಂಬ ಆದೇಶವಿತ್ತು. ಇದರಂತೆ ಅನೇಕರು ಟೆಸ್ಟ್ ಮಾಡಿಸಿ ಅಂತರಾಜ್ಯ ಸಂಚಾರದ ಪಾಸ್ ಔದ್ಯೋಗಿಕ ವಿಧಾನದಲ್ಲೇ ಪಡೆದಿದ್ದರು. ಆದರೆ ಮೊನ್ನೆ ಗುರುವಾರ ಜಿಲ್ಲಾ ಆರೋಗ್ಯ ಅಧಿಕಾರಿ ಹೊಸ ಆದೇಶ ಹೊರಡಿಸಿದ್ದಾರೆ. ಅಂಟಿಜನ್ ಟೆಸ್ಟ್ ಬದಲಿಗೆ ಪಿಟಿ ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಪ್ರಸ್ತುತ ಟೆಸ್ಟ್ ಬಿಪಿಎಲ್ ಕಾರ್ಡುದಾರರಿಗೆ ಉಚಿತ. ಉಳಿದಂತೆ 21ದಿನಗಳ ಅವಧಿಯ ಪಾಸ್ ಪಡೆಯಲು ಪ್ರತಿಯೊಬ್ಬರೂ 3500ರೂ ಸ್ವಂತ ವೆಚ್ಚ ಭರಿಸಿ ಟೆಸ್ಟ್ ನಡೆಸಬೇಕೆಂದು ಕಾಸರಗೋಡು ಜಿಲ್ಲಾಡಳಿತ ಆದೇಶಿಸಿರುವುದು ಕರುಣಾಹೀನ ಪ್ರವೃತ್ತಿಯಾಗಿದೆ.
ತಲಾ 21 ದಿನಕ್ಕೊಮ್ಮೆ 3500ರೂ ಟೆಸ್ಟ್ ಗೆ ವೆಚ್ಚ ನಾಗರಿಕರು ಭರಿಸುವುದೆಲ್ಲಿಂದ..? ಕೇವಲ 10-12ಸಾವಿರ ರೂ ವೇತನದ ಉದ್ಯೋಗಕ್ಕೆ ಮಂಗಳೂರನ್ನು ಆಶ್ರಯಿಸುವವರು, ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರ ಬದುಕನ್ನು ಪರಿಗಣಿಸದ ಈ ತುಘ್ಲಕ್ ನೀತಿ ಕಣ್ಣಿಗೆ ಗಡಿಸಂಚಾರ ಮುಕ್ತಗೊಳಿಸಿದ್ದೇವೆಂದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಅಲ್ಲವೇ..?
ಗಡಿ ಸಂಚಾರ ಮುಕ್ತ ಗೊಳಿಸಲು ಕೇಂದ್ರ ದ ಆದೇಶವಿದ್ದರೂ ಕೊರೋನದ ಹೆಸರಲ್ಲಿ ಸಬೂಬು ನೀಡುತ್ತಾ ಅದನ್ನು ಪಾಲಿಸದೇ ಜಿಲ್ಲಾಡಳಿತ ದಿನದೂಡುತ್ತಿದೆ. ಇದೇ ವೇಳೆಗೆ ಲಾಕ್ಡೌನ್ ಕಾರಣದಿಂದ ಗಡಿನಾಡಿನ ಜನತೆ ಕಳೆದ 6ತಿಂಗಳಿಂದ ಉದ್ಯೋಗ ವಂಚಿತರಾಗಿದ್ದಾರೆ. ದೇಶದಲ್ಲೆಲ್ಲೂ ಕಾಣದ ವಿಚಿತ್ರ ವಿದ್ಯಮಾನ ಕ್ಕೆ ನಮ್ಮೂರಿನ ಜನತೆ ಬಲಿಪಶುಗಳಾಗುತ್ತಿದ್ದಾರೆ. ಕೇರಳದ ಈ ಧೋರಣೆ ಅಕ್ಷಮ್ಯ ಮತ್ತು ಖಂಡನೀಯ. ಆಡಳಿತ ವ್ಯವಸ್ಥೆ ಯೇ ನೆಪಗಳ ಮರೆಯಲ್ಲಿ ಮನುಷ್ಯರ ಜೀವನ ಸ್ವಾತಂತ್ರ್ಯ ಕಸಿಯುವುದೆಂದರೆ..? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 74ವರ್ಷಗಳಾದರೂ ಗಡಿಜನತೆಯ ಬದುಕಿಗೆ ಸ್ವಾತಂತ್ರ್ಯವನ್ನೇ ನಿಷೇಧಿಸಿದ ಚಿತ್ರಣವಿದು. ಕೇರಳದ ಇತರೆಡೆಗಳಲ್ಲಿರುವ ಅಂತರ್ರಾಜ್ಯ ಸಂಚಾರ ಅವಕಾಶ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಜನರಿಗೆ ಯಾಕೆ ಇಲ್ಲಾ ?
ಕೊರೋನಾ ವ್ಯಾಪನದ ಕಾರಣ ಮುಂದಿಟ್ಟು ಮಾಡುವ ಈ ಕುಟಿಲ ರಾಜಕೀಯಕ್ಕೆ ಜನಸಾಮಾನ್ಯರ ಬದುಕು ಬಲಿಯಾಗುತ್ತಿದೆ. ಇಷ್ಟನ್ನಾದರೂ ಜಿಲ್ಲಾಡಳಿತ ಗಮನಿಸುತ್ತಿಲ್ಲ ಎಂದಾದರೆ ಗಡಿ ಪ್ರದೇಶದ ಜನತೆಯ ಬಗ್ಗೆ ರಾಜಕೀಯ ಧ್ವೇಷಸಾಧನೆಯೆಂದೇ ಪರಿಗಣಿಸಬೇಕಾಗುತ್ತದೆ.
ಕಾನೂನಿನ ಮರೆಯಲ್ಲಿ ಮಾನವೀಯತೆ ಮರೆತ ಮಮಕಾರಗಳಿಲ್ಲದ ಧೋರಣೆಗಳನ್ನು ಬದಲಾಯಿಸಬೇಕು. ಸಹಜ ನಾಗರಿಕ ಜೀವನ ನೆಮ್ಮದಿಯಿಂದ ಮತ್ತೆ ಮೊದಲಿನಂತಾಗಲು ಸಹಕರಿಸಬೇಕು..
-ಲಕ್ಷ್ಮಣ ಪ್ರಭು ಕುಂಬಳೆ.