ಬದಿಯಡ್ಕ: ಅಂತರ್ ರಾಜ್ಯ ಸಂಚಾರವನ್ನು ನಿಷೇಧಿಸಿದ ಕಾಸರಗೋಡು ಜಿಲ್ಲಾ ಆಡಳಿತಕ್ಕೆ ಎದುರಾಗಿ ಬಿಜೆಪಿ ಕಾಸರಗೋಡು ಮಂಡಲದ ವತಿಯಿಂದ ಪ್ರತಿಭಟನೆ ನಡೆಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಉದ್ಘಾಟಿಸಿ ಮಾತನಾಡಿ, ತಮ್ಮ ಜೀವನೋಪಾಯಕ್ಕಾಗಿ ದಿನನಿತ್ಯ ಕರ್ನಾಟಕಕ್ಕೆ ಸಂಚರಿಸಬೇಕಾದ ಅನಿವಾರ್ಯತೆ ಕಾಸರಗೋಡು ಜಿಲ್ಲೆಯ ಅನೇಕರಿಗಿದೆ. ಕೇಂದ್ರ ಸರಕಾರವು ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿಯನ್ನು ನೀಡಿದ್ದರೂ, ಜಿಲ್ಲಾಡಳಿತವು ಜನರನ್ನು ವಂಚಿಸುತ್ತಿರುವುದು ಖಂಡನೀಯ ಎಂದರು. ಕೂಡಲೇ ಅಂತರ್ ರಾಜ್ಯ ಸಂಚಾರಕ್ಕೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಬೇಕು ಎಂದು ಅವರು ಎಚ್ಚರಿಸಿದರು.
ಮೈರ್ಕಳ ನಾರಾಯಣ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ನೇತೃತ್ವದಲ್ಲಿ ನೇತಾರರಾದ ಸುಕುಮಾರ ಕುದ್ರೆಪ್ಪಾಡಿ, ಸುನಿಲ್ ಪಿ.ಆರ್, ರಜನಿ ಸಂದೀಪ್, ರಕ್ಷಿತ್ ಕೆದಿಲ್ಲಾಯ, ಬಾಲಕೃಷ್ಣ ಶೆಟ್ಟಿ ಕಡಾರು, ಡಿ.ಶಂಕರ, ವಿಶ್ವನಾಥ ಪ್ರಭು, ವಿಜಯಸಾಯಿ ಮೊದಲಾದವರು ಪಾಲ್ಗೊಂಡಿದ್ದರು.