ಕಾಸರಗೋಡು: ಕೇರಳ ಕೇಂದ್ರೀಯ ವಿವಿಯಲ್ಲಿ ಸ್ವತಂತ್ರ ಕೋವಿಡ್ 19 ತಪಾಸಣೆ ಪ್ರಯೋಗಾಲಯ ಸ್ಥಾಪಿಸುವ ಸಂಬಂಧ ವಿವಿ ಮತ್ತು ರಾಜ್ಯ ಸರಕಾರ ಕರಾರಿಗೆ ಸಹಿ ಮಾಡಿಕೊಂಡಿವೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಅತ್ಯಾಧುನಿಕ ವೈರಸ್ ಸಂಶೋಧನೆ-ರೋಗ ಪತ್ತೆ ಪ್ರಯೋಗಾಲಯವಾಗಿ ಭವಿತವ್ಯದಲ್ಲಿ ಈ ಲ್ಯಾಬ್ ಅಭಿವೃದ್ಧಿಗೊಳ್ಳಲಿದೆ.
ಈಗ ಜಿಲ್ಲೆಯಲ್ಲಿ ಈ ಕೋವಿಡ್ ರೋಗ ಪತ್ತೆ ಲ್ಯಾಬ್ ಕೇಂದ್ರೀಯ ವಿವಿಯ ಪೆರಿಯ ಕ್ಯಾಂಪಸ್ ನ ಬಯೋಕೆಮಿಸ್ಟ್ರಿ ಆಂಡ್ ಮಾಲಿಕ್ಯೂಲಾರ್ ಬಯಾಲಜಿ ವಿಭಾಗದ ಪ್ರಯೋಗಾಲಯದಲ್ಲಿ ಚಟುವಟಿಕೆ ನಡೆಸುತ್ತಿದೆ. ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನೀಶಿಯನ್ ಗಳಲ್ಲದೆ ವಿವಿಯ ಫ್ಯಾಕಲ್ಟಿ ಸದಸ್ಯರ, ಇಲಾಖೆಯ ಹಿರಿಯ ಸಂಶೋಧನೆ ಪರಿಣತರ ಬೆಂಬಲದೊಂದಿಗೆ ಈ ಲ್ಯಾಬ್ ಕಾರ್ಯ ಪ್ರವೃತ್ತವಾಗಿದೆ.
ಸ್ವತಂತ್ರ ಲ್ಯಾಬ್ ಗೆ ಪ್ರತ್ಯೇಕ ಕಟ್ಟಡ:
ನೂತನವಾಗಿ ಸ್ಥಾಪಿಸುವ ಲ್ಯಾಬ್ ಗೆ ಕ್ಯಾಂಪಸ್ ನೊಳಗೆ ಪ್ರತ್ಯೇಕ ಕಟ್ಟಡವಿರುವುದು. ಈ ಕಟ್ಟಡ ಕ್ಯಾಂಪಸ್ ನ ಪ್ರಧಾನ ಅಕಾಡೆಮಿಕ್ ಸಮುಚ್ಚಯದಿಂದ ಬಹುದೂರ ಇರಲಿದ್ದು, ಇದರಿಂದ ವಿವಿಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಯಾವುದೇ ಆತಂಕವಿರುವುದಿಲ್ಲ ಎಂದು ಕೋವಿಡ್ ಸಂಬಂಧ ತಪಾಸಣೆ ಚಟುವಟಿಕೆಗಳಿಗೆ ನೇತೃತ್ವ ವಹಿಸುತ್ತಿರುವ ಬಯೋ ಕೆಮಿಸ್ಟ್ರಿ ಆಂಡ್ ಮಲಿಕ್ಯೂಲಾರ್ ಬಯಾಲಜಿ ಇಲಾಖೆ ಮುಖ್ಯಸ್ಥ ಡಾ.ರಾಜೇಂದ್ರ ಪಿಲಾಂಕಟ್ಟೆ ತಿಳಿಸಿದರು.
ಅಕಾಡೆಮಿಕ್ ಚಟುವಟಿಕೆಗಳು ಸೂಕ್ತ ಅವಧಿಯಲ್ಲೇ ಪೂರ್ತಿಗೊಳ್ಳಬೇಕಿದೆ. ಎಂಎಸ್.ಸಿ., ಪಿ.ಹೆಚ್.ಡಿ. ವಿಭಾಗದಲಿರುವವರಿಗೆ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ಮುಂದುವರಿಯಬೇಕಿದೆ. ಈಗ ವಿವಿಯ ಉಪಕರಣಗಳನ್ನು ಬಳಸಿ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ನೂತನ ಕಟ್ಟಡಕ್ಕೆ ಲ್ಯಾಬ್ ಸ್ಥಳಾಂತರಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಪುನರ್ ಸ್ಥಾಪನೆಗೊಳ್ಳಲಿರುವುದು ಸಮಾಧಾನ ನೀಡಲಿದೆ. ಆರೋಗ್ಯ ಇಲಾಖೆಯ ಬೆಂಬಲದೊಂದಿಗೆ ಸ್ವತಂತ್ರ ಸಂಶೋಧನೆ ಕೇಂದ್ರವಾಗಿ ಈ ಲ್ಯಾಬ್ ಅಭಿವೃದ್ಧಿಗೊಳ್ಳುವ ವೇಳೆ ವೈರಸ್ ಕೇಂದ್ರಿತ ರೋಗಗಳ ತಪಾಸಣೆ ಮತ್ತು ಸಂಶೋಧನೆಗೆ ಅವಕಾಶ ಲಭಿಸುತ್ತದೆ. ಈ ವರೆಗೆ ಉನ್ನತ ಗುಣಮಟ್ಟದ ಪ್ರಯೋಗಾಲಯ ಸೌಲಭ್ಯಗಳು ಇಲ್ಲದೇ ಇದ್ದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ರೋಗಿಗಳಿಗೆ ಇದು ಬಲು ಸಹಕಾರಿಯಾಗಿ ಪರಿಣಮಿಸಲಿದೆ ಎಂದವರು ನುಡಿದರು.
ಈಗ ನಡೆಸಿದ್ದು 20 ಸಾವಿರಕ್ಕೂ ಅಧಿಕ ಟೆಸ್ಟ್ ಗಳು:
ಈಗ 20 ಸಾವಿರಕ್ಕೂ ಅಧಿಕ ಟೆಸ್ಟ್ ಗಳನ್ನು ಇಲ್ಲಿರುವ ವಿವಿ ಲ್ಯಾಬ್ ನಲ್ಲಿ ನಡೆಸಲಾಗಿದೆ. ಫಲಿತಾಂಶ ಲಭ್ಯತೆಯಲ್ಲಿ ಸಾಧ್ಯವಾದಷ್ಟೂ ವಿಳಂಬವಾಗದಂತೆ ನೋಡಿಕೊಳ್ಳಲಾಗಿದೆ. ಸ್ಥಳೀಯ ರೋಗ ಖಚಿತ ಪ್ರಕ್ರಿಯೆಯೂ ಹೆಚ್ಚಳಗೊಂಡಿದೆ. ಜೊತೆಗೆ ವಿವಿ ಹಾಸ್ಟೆಲ್ಗಳು ಕೋವಿಡ್ ರೋಗಿಗಳ ಕ್ವಾರೆಂ ಟೈನ್ ಕೇಂದ್ರವಾಗಿ ಚಟುವಟಿಕೆ ನಡೆಸುತ್ತಿದೆ.
ಈ ಸಂಬಂಧ ವಿವಿಯ ಪೆರಿಯ ಕ್ಯಾಂಪಸ್ ಕಚೇರಿಯಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ವಿವಿ ಉಪ ಕುಲಪತಿ ಪೆÇ್ರ.ಜಿ.ಗೋಪಕುಮಾರ್, ಸಹಾಯಕ ಉಪಕುಲಪತಿ ಡಾ.ಕೆ.ಜಯಪ್ರಕಾಶ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಎನ್.ಎಚ್.ಎಂ.ಡಿ.ಪಿ.ಎಂ. ಡಾ.ರಾಮನ್ ಸ್ವಾತಿ ವಾಮನ್, ವಿವಿ ರೆಜಿಸ್ತ್ರಾರ್ ಡಾ.ರಾಧಾಕೃಷ್ಣನ್ ನಾಯರ್, ಹಣಕಾಸು ಅಧಿಕಾರಿ ಡಾ.ಪ್ರಸನ್ನ ಕುಮಾರ್, ಡಾ.ಮುರಳೀಧರನ್ ನಂಬ್ಯಾರ್, ಡಾ.ರಾಜೇಂದ್ರ ಪಿಲಾಂಕಟ್ಟೆ, ಡಾ.ವಿ.ಬಿ. ಸಮೀರ್ ಕುಮಾರ್, ರಾಜಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.