ಕಾಸರಗೋಡು: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಮುಚ್ಚಿದ್ದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಗಡಿಯಲ್ಲಿರುವ ಒಳವರ ಸೇತುವೆಯನ್ನು ಇದೀಗ ಸಂಪೂರ್ಣ ಮುಕ್ತಗೊಳಿಸಲಾಗಿದೆ. ಸಚಿವ ಇ ಚಂದ್ರಶೇಖರನ್ ಮತ್ತು ತ್ರಿಕ್ಕರಿಪುರ ಶಾಸಕ ಎಂ.ರಾಜಗೋಪಾಲನ್ ಮತ್ತು ಕಣ್ಣೂರು ಜಿಲ್ಲಾಧಿಕಾರಿಗಳ ನಡುವಿನ ಚರ್ಚೆಯ ತರುವಾಯ ಮುಚ್ಚಿದ ಒಳವರ ಸೇತುವೆಯ ಸಂಚಾರವನ್ನು ಶುಕ್ರವಾರದಿಂದ ಪುನಃಸ್ಥಾಪಿಸಲು ನಿರ್ಧರಿಸಲಾಯಿತು.
ಸೇತುವೆ ಮುಚ್ಚಿದ್ದರಿಂದ ಜನರ ಸಂಕಷ್ಟದ ಬಗ್ಗೆ ಮಾಧ್ಯಮಗಳು ವರದಿ ಮಾಡಿತ್ತು. ಪತ್ರ ಮತ್ತು ಇ-ಮೇಲ್ ಮೂಲಕ ಸೇತುವೆಯನ್ನು ತೆರೆಯುವ ಅಗತ್ಯತೆಯ ಬಗ್ಗೆ ಸಂಬಂಧಪಟ್ಟ ಶಾಸಕರು ಕಣ್ಣೂರು ಕಲೆಕ್ಟರ್‍ಗೆ ತಿಳಿಸಿದ್ದರು. ಅವರು ಕಣ್ಣೂರು ಪೆÇಲೀಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಕಣ್ಣೂರು ಜಿಲ್ಲಾಡಳಿತ ಗುರುವಾರ ರಸ್ತೆ ಸಂಚಾರ ಮುಕ್ತಗೊಳಿಸಲು ತಯಾರಿ ನಡೆಸಿತು. ಕಾಸರಗೋಡು ಗಡಿಯಲ್ಲಿರುವ ತಿಕ್ಕರಿಪುರದಿಂದ ಕಣ್ಣೂರು ಜಿಲ್ಲೆಗೆ ಸಾರ್ವಜನಿಕ ಸಾರಿಗೆ ಸಾಮಾನ್ಯವಾಗಿ ಒಳವರ ಸೇತುವೆ ಮೂಲಕ ನಡೆಯುತ್ತವೆ.
ತ್ರಿಕ್ಕರಿಪುರ ಮತ್ತು ವಲಿಯಪರಂಬದ ಜನರು ಪಯ್ಯನ್ನೂರ್ ನ್ನು ಮುಖ್ಯ ಪಟ್ಟಣವಾಗಿ ಅವಲಂಬಿಸಿದ್ದಾರೆ. ಪಯ್ಯನ್ನೂರು ಪುರಸಭೆಯಲ್ಲಿ ಕೋವಿಡ್‍ನ ಕಟ್ಟುನಿಟ್ಟಿನ ನಿಯಂತ್ರಣದಿಂದಾಗಿ ತ್ರಿಕ್ಕರಿಪುರವನ್ನು ಸಂಪರ್ಕಿಸುವ ಸೇತುವೆಯನ್ನು ಮುಚ್ಚಲಾಗಿತ್ತು. ಸೇತುವೆ ತೆರೆಯುವುದರೊಂದಿಗೆ ಪಯ್ಯನ್ನೂರಿಗೆ ಬಸ್ ಸೇವೆಯೂ ಪ್ರಾರಂಭವಾಯಿತು. ಈ ಮಾರ್ಗದಲ್ಲಿ ಆರಂಭದ ದಿನ ಆರು ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದವು.