ಮಂಜೇಶ್ವರ: ಮಂಗಳೂರು ವಿಶ್ವವಿದ್ಯಾಲಯ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶನಿವಾರ ಸಂಜೆ ಗೂಗಲ್ ಮೀಟ್ ಆಪ್ ಮೂಲಕ ವೆಬಿನಾರ್ ನಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಲೇಖಕ,ಯಕ್ಷಗಾನ ಅರ್ಥಧಾರಿ ವೈದ್ಯ ಡಾ.ರಮಾನಂದ ಬನಾರಿ ಅವರ ಅರ್ಥಾಯನ ಮತ್ತು ಒಳದಾರಿಯ ಬೆಳದಿಂಗಳು ಕೃತಿಗಳ ಬಿಡುಗಡೆ ಹಾಗು ತಾಳಮದ್ದಳೆ: ಸ್ವತಂತ್ರ ಕಲೆಯಾಗಬಹುದೇ? ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವೆಬ್ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ನೂತನ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಗಳು ಡಾ.ಬನಾರಿ ಅವರ ವಿದ್ವತ್ತು ಮತ್ತು ಜೀವನಾನುಭಗಳು ಅಪಾರವಾಗಿದ್ದು ಸಮಗ್ರ ಸಾಹಿತ್ಯ ಮತ್ತುಕಲಾ ಪ್ರಪಂಚಕ್ಕೆ ತನ್ನದೇ ಕೊಡುಗೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ಶ್ರೀಮಠದೊಮದಿಗೆ ನಿಕಟ ಸಂಬಂಧಗಳನ್ನು ಹೊಂದಿರುವ ಡಾ.ಬನಾರಿಯವರು ಬಹುಮುಖ ಚಿಂತನೆ, ವಿಶಾಲ ಹೃದಯವಂತಿಕೆಯ ಮೂಲಕ ಎಲ್ಲರ ಮನಗೆದ್ದವರು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕೃತಿ ಅವಲೋಕನ ನಡೆಸಿ ಮಾತನಾಡಿ ಸೂಕ್ಷ್ಮ ಸಂವೇದನೆಯ ಕವಿ ಮನಸ್ಸಿನ ಭಾವ ಕೃತಿಗಳಲ್ಲಿ ಅಚ್ಚೊತ್ತಿದೆ ಎಂದರು.
ತಾಳಮದ್ದಳೆ: ಸ್ವತಂತ್ರ ಕಲೆಯಾಗಬಹುದೇ? ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ರಮಾನಂದ ಬನಾರಿ ಅವರು ಯಕ್ಷಗಾನ ಹಾಗೂ ಅದರ ಮಾತುಗಾರಿಕೆ ಅದ್ಬುತ ಕಲೆಯಾಗಿ ರೂಪುಗೊಳ್ಳುವಲ್ಲಿ ಎಂದಿಗೂ ಸರಿಗಟ್ಟಲಾಗದ ಮೈಲುಗಲ್ಲು ಸ್ಥಾಪಿಸಿದೆ.ಇದರೊಳಗೆ ಸ್ವರ ವಿನ್ಯಾಸದ ಕಲೆಯಿಂದ ವಾಚಿಕ ಚಮತ್ಕಾರದ ತಾಳಮದ್ದಳೆ ವಿಶಿಷ್ಟ ಕಲಾ ಪ್ರಕಾರ. ವಾಚಿಕ ವೈಶಿಷ್ಟ್ಯದ ಮೂಲಕ ತಾಳ ಮದ್ದಳೆ ಸ್ವತಂತ್ರ ಕಲೆಯಾಗಿ ಮೂಡಿಬರಬೇಕು. ಆಂಗಿಕ ಅಭಿನಯಗಳನ್ನು ಸಮತೋಲನದ ಸಾಮರಸ್ಯದೊಂದಿಗೆ ಅಳವಡಿಸಿಕೊಂಡಾಗ ಪರಿಪೂರ್ಣತೆ ಪಡೆಯಬಲ್ಲದು. ತನ್ಮಯತೆ, ನಾದಾವರಣದಿಂದ ಅರ್ಥಧಾರಿ ಹೊರಬರಬಾರದು. ಯಕ್ಷಗಾನದ ಮೂಲವನ್ನು ಮರೆಯಬಾರದು, ತೊರೆಯಬಾರದು. ಆಶು ಭಾಷಿತ್ವ, ಸಮಷ್ಠಿಯ ಸಂವಿಧಾನ ತಾಳಮದ್ದಳೆಯ ಮೂಲ ಸ್ವರೂಪ ಎಂದು ತಿಳಿಸಿದರು. ಕುಲಸಚಿವ ರಾಜು ಮೊಗವೀರ ಕೆ.ಎಸ್., ಪ್ರೊ.ಗಣೇಶ್ ಸಂಜೀವ, ಸ್ವಾತಿ ರಾವ್ ಉಪಸ್ಥಿತರಿದ್ದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ್ ಕೊಣಾಜೆ ವಂದಿಸಿದರು. ವಿನುತ ಗಟ್ಟಿ ನಿರೂಪಿಸಿದರು.