ಬದಿಯಡ್ಕ: ಸಮಗ್ರ ವೈವಿಧ್ಯತೆಯ ಭರತ ಖಂಡದ ಸಾರ್ವಭೌಮ ಸ್ವಾತಂತ್ರ್ಯವನ್ನು ಕಾಪಿಡುವಲ್ಲಿ ಹಿರಿಯ ತಲೆಮಾರಿನ ಮಾರ್ಗದರ್ಶಿ ಬದುಕು, ಹೋರಾಟ ಮೊದಲಾದವುಗಳು ಮಾದರಿಗಳಾಗಿವೆ. ಇಂದಿನ ಕೋವಿಡ್ ಸಂಕಟಗಳ ಮಧ್ಯೆ ಜನಸಾಮಾನ್ಯರ ಜೀವನ ಸಂಕಟಗೊಳಗಾಗದಿರಲು ಪ್ರತಿಯೊಬ್ಬ ಸಭ್ಯ ನಾಗರಿಕನೂ ಜವಾಬ್ದಾರಿಯುತರಾಗಿ ಮುನ್ನಡೆಯಬೇಕು ಎಂದು ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಕರೆನೀಡಿದರು.
ಬ್ರದರ್ಸ್ ಮಾನ್ಯ ನೇತೃತ್ವದಲ್ಲಿ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ರಾಷ್ಟ್ರದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣಗೈದು, ಬಳಿಕ ವಿಷ್ಣುಮೂರ್ತಿನಗರ-ಕಡವು ರಸ್ತೆಗೆ ದಿ.ಸುಬ್ರಾಯ ಮಾಸ್ತರ್ ರಸ್ತೆಯೆಂದು ನಾಮಕರಗೊಳಿಸಿದ ನಾಮ ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ದಿ.ಸುಬ್ರಾಯ ಮಾಸ್ತರ್ ಅವರು ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಸಂಪೂರ್ಣ ತೊಡಗಿಸಿಕೊಂಡ ಸಾಧನಾಶೀಲರಾಗಿದ್ದಾರೆ. ಅವರಂತವರ ಸಾಧನೆಗಳು ನಮ್ಮ ಬದುಕಿಗೆ ಬಲತುಂಬುವ ವ್ಯಕ್ತಿತ್ವವಾಗಿ ನಮ್ಮೊಡನಿರುತ್ತಾರೆ ಎಂದರು.
ಮಾನ್ಯ ಜ್ಞಾನೋದಯ ಅನುದಾನಿತ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ನವೀನಚಂದ್ರ ಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮಗಾಂಧಿ ಸಹಿತ ಅವರಿಗಿಂತಲೂ ಹಿಂದೆಯೇ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವತೇದ ಮಹಿಳೆಯರೂ ಸಹಿತ ಪೂಜ್ಯ ಸಾಧಕರ ಹೋರಾಟ-ನೆನಪುಗಳು ನಮ್ಮಲ್ಲಿರಬೇಕು. ಅಂತಹ ಅರಿವಿನಿಂದ ಮಾತ್ರ ಸ್ವಾತಂತ್ರ್ಯದ ನೈಜತೆ ಉಳಿಯಬಲ್ಲದು ಎಂದು ತಿಳಿಸಿದರು.
ಗ್ರಾ.ಪಂ.ಸದಸ್ಯೆ ಪ್ರೇಮಾಕುಮಾರಿ, ಬ್ರದರ್ಸ್ ಮಾನ್ಯದ ಗೌರವಾಧ್ಯಕ್ಷ ಮುದ್ದುಕೃಷ್ಣ ಸಿ.ಎಚ್ ಉಪಸ್ಥಿತರಿದ್ದು ಶುಭಹಾರೈಸಿದರು.ವಿವೇಕ್ ಮಾನ್ಯ ಸ್ವಾಗತಿಸಿ, ಆಶಿಶ್ ಮಾನ್ಯ ವಂದಿಸಿದರು. ಮಂಜುನಾಥ ಡಿ.ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ಬ್ರದರ್ಸ್ ಮಾನ್ಯದ ಅಧ್ಯಕ್ಷ ವೆಂಕಟರಾಜ್, ಕಾರ್ಯದರ್ಶಿ ನವೀನ್ ಎಂ.ಜಿ., ಖಜಾಂಜಿ ರವಿಕಿರಣ್ ಮೊದಲಾದವರು ನೇತೃತ್ವ ವಹಿಸಿದ್ದರು.