ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ 14 ದಿನಗಳು ನಿರ್ಣಾಯಕ, ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು : ಜಿಲ್ಲಾಧಿಕಾರಿ
ಕಾಸರಗೋಡು: ಸಂಪರ್ಕ ಮೂಲದಿಂದ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ 14 ದಿನಗಳು ನಿರ್ಣಾಯಕವಾಗಲಿದ್ದು, ಸಾರ್ವಜನಿಕರು ಹೆಚ್ಚುವರಿ ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಬುಧವಾರ ಆನ್ ಲೈನ್ ಮೂಲಕ ನಡೆದ ಕೋವಿಡ್ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಲಸ್ಟರ್ ಆಗಿ ಘೋಷಿಸಲಾದ ಪ್ರದೇಶಗಳಲ್ಲಿ ವ್ಯಾಪಾರ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಹೋಟೆಲ್ ಗಳು ಇತ್ಯಾದಿ ಕಾರ್ಯಾಚರಿಸಕೂಡದು. ಕ್ಲಸ್ಟರ್ ಪ್ರದೇಶಗಳ ಒಳಗೆ ಮತ್ತು ಹೊರಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಪ್ರದೇಶಗಳ ಎಲ್ಲ ಜನತೆಯ ಬಗ್ಗೆ ನಿಗಾ ಇರಿಸಲಾಗುವುದು. ಹೆಚ್ಚುವರಿ ಕಟ್ಟುನಿಟ್ಟುಗಳು ಬೇಕು ಎಂದು ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳಿಗೆ ಅನಿಸುವುದಿದ್ದರೆ ಕೇರಳ ಮುನಿಸಿಪಾಲಿಟಿ ಕಾಯಿದೆ ಯಾ ಕೇರಳ ಪಂಚಾಯತ್ ರಾಜ್ ಕಾಯಿದೆಗಳ ಪ್ರಕಾರ ಕಟ್ಟುನಿಟ್ಟುಗಳನ್ನು ಜಾರಿಗೊಳಿಸಲಾಗುವುದು ಎಂದವರು ನುಡಿದರು.
ತುರ್ತು ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ 21 ಸಿ.ಎಫ್.ಎಲ್.ಟಿ.ಸಿ.ಗಳ ರೂಪದಲ್ಲಿ 4300 ಹಾಸುಗೆಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಯಾವ ಪ್ರದೇಶಕ್ಕೂ ಅನಾವಶ್ಯಕ ಸಂಚಾರ ನಡೆಸುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು, ಸಾರ್ವಜನಿಕ ಪ್ರದೇಶಗಳಿಗೆ ಅನಾವಶ್ಯಕವಾಗಿ ತೆರಳುವ ಕ್ರಮ ಕೈಬಿಟ್ಟು, ಜಿಲ್ಲಾಡಳಿತ ತಿಳಿಸಿರುವ ಎಲ್ಲ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿರುವರು.