ಕಾಸರಗೋಡು: ಬದುಕನ್ನು ಪಣವಾಗಿರಿಸಿ ರಾಷ್ಟ್ರದ ಸ್ವಾತಂತ್ರ್ಯ ಸಮಾನತೆಯನ್ನು ಕಾಪಿಡುವಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜವಾಬ್ದಾರನಾಗಿರುವ ಸಂದರ್ಭ ವರ್ತಮಾನದ್ದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ತಿಳಿಸಿದರು.
ಕಾಸರಗೋಡು ಮುನ್ಸಿಪಲ್ ಸ್ಟೀಡಿಯಂ ನಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.
ಪೌರಾಣಿಕ ಪರಂಪರೆಯ ಮಹಾನ್ ಹಿನ್ನೆಲೆಯ ನಮ್ಮ ರಾಷ್ಟ್ರ ವಿಶಿಷ್ಟ ಚಿಂತನೆ ಜೀವನಧರ್ಮ ಮತ್ತು ವೃತ್ತಿ ಧರ್ಮವನ್ನು ಸಮರ್ಥವಾಗಿ ನಿಭಾಯಿಸಿ ಸುಧೀರ್ಘ ಕಾಲದಿಂದ ಬೆಳೆದುಬಂದಿದ್ದು, ಜಗತ್ತಿನ ಇತರ ದೇಶಗಳಿಗೆ ಮಾರ್ಗದರ್ಶಿಯಾಗಿದೆ. ನಮ್ಮ ಸಂವಿಧಾನ ಸಂಕಲ್ಪವೂ ಅಪೂರ್ವವಾಗಿ ಬಲಯುತ ಪ್ರಜಾಪ್ರಭುತ್ವದ ಬುನಾದಿಗೆ ಸುಗಮತೆಯೊದಗಿಸಿದೆ. ಸಾರ್ವಭೌಮತೆಯ ಸಂಕೇತವಾದ ಸಂವಿಧಾನ ನಾಶಗೊಂಡರೆ ಪ್ರಜಾಪ್ರಭುತ್ವ ನೆಲೆಗೊಳ್ಳದು ಎಂದು ಸಚಿವರು ತಿಳಿಸಿದರು. 25 ಅಧ್ಯಾಯಗಳಲ್ಲಿ 12 ಶೆಡ್ಯೂಲ್ ಗಳಲ್ಲಿ 400ಕ್ಕಿಂತಲೂ ಹೆಚ್ಚು ಆರ್ಟಿಕಲ್ ಗಳಿರುವ ಮಹಾನ್ ಸಂವಿಧಾನ ರಾಷ್ಟ್ರದ ಕೊಟ್ಟಕೊನೆಯ ಹಿಂದುಳಿದ ವ್ಯಕ್ತಿಯ ಹಕ್ಕನ್ನು ಎತ್ತಿಹಿಡಿಯುತ್ತದೆ ಎಂದು ತಿಳಿಸಿದರು. ರಾಷ್ಟ್ರದಲ್ಲಿ 22 ಅಧಿಕೃತ ಭಾಷೆಗಳೂ, 1652 ಮಾತೃಭಾಷೆಗಳೂ ಇರುವ ವೈವಿಧ್ಯಮಯ ಸಂಸ್ಕøತಿ ಜಗತ್ತಿನ ಬೇರೊಂದೆಡೆ ಇಲ್ಲ ಎಂದ ಅವರು ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವುವ ಜವಾಬ್ದಾರಿ ಪ್ರತಿಯೊಬ್ಬನ ಕರ್ತವ್ಯ ಎಂದು ನೆನಪಿಸಿದರು.
ವಿವಿಧತೆಯಲ್ಲಿ ಏಕತೆ ನಮ್ಮ ಮೂಲ ಮಂತ್ರವಾಗಿರುವುದರಿಂದಲೇ ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ರಚನೆಗೊಂಡಿದೆ ಎಂದು ಕಂದಾಯ ಸಚಿವ ಅಭಿಪ್ರಾಯಪಟ್ಟರು.
ದ್ವಿತೀಯ ಜಾಗತಿಕ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ಅತ್ಯಂತ ದೊಡ್ಡ ದುರಂತ ಕೋವಿಡ್ 19 ಆಗಿದೆ. ವಿಶ್ವಾದ್ಯಂತ 2 ಕೋಟಿಗೂ ಅಧಿಕ ಮಂದಿಯನ್ನು ರೋಗಿಯಾಗಿಸಿದ ಈ ಮಹಾಮಾರಿ, ಏಳೂವರೆ ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ದೇಶವಿಡೀ ಈ ಪಿಡುಗಿನ ನಿವಾರಣೆಗೆ ಒಗ್ಗಟ್ಟಿನ ಹೋರಾಟದಲ್ಲಿದೆ. ಜೊತೆಗೆ ರಾಜ್ಯದಲ್ಲಿ ನಡೆದ ಪ್ರಾಕೃತಿಕ ದುರಂತಗಳು ಜನತೆಯನ್ನು ತಲ್ಲಣಗೊಳಿಸಿವೆ. ಮೂನ್ನಾರ್ ಪೆಟ್ಟಿಮೂಡಿ ದುರಂತ, ಕರಿಪುರ ವಿಮಾನ ದುರಂತ ಇತ್ಯಾದಿಗಳಲ್ಲಿ ಅನೇಕ ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ ಮಾನವೀಯ ಅನುಕಂಪ ಜೊತೆಗಿನ ರಕ್ಷಣಾ ಚಟುವಟಿಕೆಗಳು ಇತ್ಯಾದಿ ದುರಂತಗಳ ಆಘಾತವನ್ನು ಕಡಿಮೆಗೊಳಿಸಿವೆ ಎಂಬುದೂ ಗಮನಾರ್ಹ ಎಂದರು.
ಅಮಾನವೀಯವಾಗಿ ಸಮಾಜವನ್ನು ಒಡೆಯುವ ಷಡ್ಯಂತ್ರಗಳಿಗೆ ವಿರುದ್ಧವಾಗಿ ಜನಮಾನಸದ ಒಗ್ಗಟ್ಟು ಪ್ರಬಲಗೊಳ್ಳಬೇಕು. ಸ್ನೇಹ, ಸೌಹಾರ್ದಯುತ ಬದುಕಿನೊಂದಿಗೆ ಸ್ವಾತಂತ್ರ್ಯವನ್ನು ನಾವು ಅರ್ಥ ಪೂರ್ಣಗೊಳಿಸಬೇಕು ಎಂದವರು ನುಡಿದರು.
. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಎ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡು ಮತ್ತು ಕಣ್ಣೂರು ಕ್ರೈಂ ಬ್ರಾಂಚ್ ಎಸ್.ಪಿ. ಮೊಯ್ದೀನ್ ಕುಟ್ಟಿ, ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞÂ ಚಾಯಿಂಡಡಿ, ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಪರೇಡ್ ಗೆ ಇನ್ಸ್ ಪೆಕ್ಟರ್ ಆಫ್ ಪೆÇಲೀಸ್ ಪಿ.ನಾರಾಯಣನ್ ನೇತೃತ್ವ ವಹಿಸಿದ್ದರು. ಎಸ್.ಐ.ಸಿ.ವಿ.ಶ್ರೀಧರನ್ ಸೆಕೆಂಡ್ ಕಮಾಂಡರ್ ಆಗಿದ್ದರು.