ಕಾಸರಗೋಡು: ಜನರ ಜೀವನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇರಳ ಸರಕಾರಕ್ಕೆ ಆಸಕ್ತಿಯಿಲ್ಲವೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದರು.
ಕಾಸರಗೋಡು ಜಿಲ್ಲೆಯ ಜನರಿಗೆ ಕರ್ನಾಟಕಕ್ಕೆ ತೆರಳಲು ಕೇರಳ ಸರಕಾರ ಏರ್ಪಡಿಸಿದ ಪ್ರಯಾಣ ತಡೆ ತೆರವುಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವದಲ್ಲಿ ನಡೆಯುವ ಸತ್ಯಾಗ್ರಹವನ್ನು ನಿನ್ನೆ ವಚ್ರ್ಯುವಲ್ ಮೀಟ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಮಾರಿ ಕೋವಿಡ್‍ನಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವಾಗುವ ಬದಲಾಗಿ ಕೇರಳ ಮುಖ್ಯಮಂತ್ರಿ ಕಚೇರಿ ಸಹಿತ ಭ್ರಷ್ಟಾಚಾರ, ಕಳ್ಳಸಾಗಾಟದಲ್ಲಿ ನಿರತವಾಗಿದೆ ಎಂದು ಅವರು ಆರೋಪಿಸಿದರು.
ಹಿಂದುಳಿದ ಜಿಲ್ಲೆಯಾದ ಕಾಸರಗೋಡಿನ ಬಹುತೇಕ ಜನರು ಆಸ್ಪತ್ರೆ, ಶಿಕ್ಷಣ, ಉದ್ಯೋಗ, ವ್ಯಾಪಾರ ಮೊದಲಾಗಿ ದೈನಂದಿನ ಅಗತ್ಯಗಳಿಗೆ ಕರ್ನಾಟಕವನ್ನು ಆಶ್ರಯಿಸಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ತೆರಳಲು ತಡೆಯೊಡ್ಡಿರುವುದರಿಂದ ಕಾಸರಗೋಡಿನ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಆರಂಭದಲ್ಲಿ ಕಾಸರಗೋಡಿನಲ್ಲಿ ಪ್ರಥಮವಾಗಿ ಕೋವಿಡ್ ವರದಿಯಾದಾಗ ಕರ್ನಾಟಕ ಸರಕಾರ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ತಡೆಯೊಡ್ಡಿತ್ತು. ಈ ಸಂದರ್ಭದಲ್ಲಿ ಕೇರಳ ಸರಕಾರ ಹಾಗು ಸಿಪಿಎಂ ಕರ್ನಾಟಕ ಸರಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿತ್ತು. ಅದೇ ಕೇರಳ ಸರಕಾರ ಇದೀಗ ಕರ್ನಾಟಕಕ್ಕೆ ಕಾಸರಗೋಡಿನ ನಿವಾಸಿಗಳು ತೆರಳದಂತೆ ತಡೆಯೊಡ್ಡಿ ತೊಂದರೆ ನೀಡುತ್ತಿದ್ದಾರೆ ಎಂದರು. ಈ ಮೂಲಕ ಕೇರಳ ಸರಕಾರ ಹಾಗು ಸಿಪಿಎಂ ರಾಜಕೀಯ ಲಾಭಕ್ಕೆ ಕುಪ್ರಚಾರ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ ಅಧ್ಯಕ್ಷತೆ ವಹಿಸಿದರು. ಬಿಜೆಪಿ ವಲಯ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಎಸ್.ಸಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂಪತ್ ಕುಮಾರ್, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯನ್ ಮಧೂರು, ಬಿಜೆಪಿ ಕಾಸರಗೋಡು ಮಂಡಲ ಕಾರ್ಯದರ್ಶಿ ಪಿ.ಆರ್.ಸುನಿಲ್ ಮೊದಲಾದವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಸತೀಶ್ ವಂದಿಸಿದರು.