ನವದೆಹಲಿ: ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಸಕಾಲಕ್ಕೆ ಪಿಂಚಣಿ ತಲುವಂತೆ ಹಾಗೂ ಒಂಟಿಯಾಗಿರುವ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ತಲುಪುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಹಿರಿಯ ನಾಗರೀಕರ ಸಂಕಷ್ಟಗಳ ಕುರಿತಂತೆ ಕೇಂದ್ರದ ಮಾಜಿ ಕಾನೂನು ಸಚಿವೆ ಅಶ್ವಿನಿ ಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಹಿರಿಯ ನಾಗರೀಕರಿಗೆ ಆಹಾರ, ನೀರು, ಔಷಧಿ, ಮಾಸ್ಕ್ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕು, ಪ್ರಮುಖವಾಗಿ ಒಂಟಿಯಾಗಿರುವ ಹಿರಿಯರಿಗೆ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿರುವ ನ್ಯಾಯಪೀಠ, ಹಿರಿಯ ನಾಗರೀಕರ ಸಮಸ್ಯೆ ಸಂಬಂಧ ರಾಜ್ಯ ಸರ್ಕಾರಗಳು ತ್ವರಿತಗತಿಯಲ್ಲಿ ಸ್ಪಂದನೆ ನೀಡಬೇಕು. ಹಿರಿಯ ನಾಗರೀಕರಿಗೆ ಸೂಕ್ತ ಸಮಯಕ್ಕೆ ಪಿಂಚಣಿ, ಅಗತ್ಯವಸ್ತುಗಳನ್ನು ಪೂರೈಸಬೇಕೆಂದು ಸೂಚಿಸಿದೆ.