ಮಂಜೇಶ್ವರ: ಬಡಾಜೆಯ ಯುವಕ ಸಂಘದ ಆಶ್ರಯದಲ್ಲಿ 74 ನೇ ವರ್ಷದ ಸ್ವಾತಂತ್ರೋತ್ಸವ ಹಾಗೂ ಸಾಧಕರ ಅಭಿನಂದನಾ ಸಮಾರಂಭವು ವಿವಿಧ ಕಾರ್ಯಕ್ರಮಗಳೊಂದಿಗೆ ಕ್ಲಬ್ ಪರಿಸರದಲ್ಲಿ ಜರಗಿತು. ಸಂಘದ ಅಧ್ಯಕ್ಷ ಪದ್ಮನಾಭ ಸ್ಫೂರ್ತಿನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿವರ್ಯರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಬೇಬಿಲತಾ ಯಾದವ ಸ್ವಾತಂತ್ರೋತ್ಸವದ ಮೂಲಕ ರಾಷ್ಟ್ರ ಜಾಗೃತಿ, ರಾಷ್ಟ್ರಭಕ್ತಿ ಇನ್ನಷ್ಟು ಸದೃಢವಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ 2019-20ನೇ ಶೈಕ್ಷಣಿಕ ವರ್ಷದಲ್ಲಿ ನವೋದಯ ವಿದ್ಯಾರ್ಥಿಯಾಗಿದ್ದು 12ನೇ ತರಗತಿಯಲ್ಲಿ ಶೇಕಡಾ 95 ಕ್ಕಿಂತಲೂ ಅಧಿಕ ಅಂಕಗಳೊಂದಿಗೆ ನಾಡಿಗೆ ಕೀರ್ತಿ ತಂದ ಪಡುಬೈಲು ದಿವಂಗತ ಸೀತಾರಾಮ - ಸುಜಾತ ದಂಪತಿ ಸುಪುತ್ರ ಹರ್ಷಿತ್ ಬಿ.ಎಸ್, ಹಾಗೂ ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ಸರಸ್ವತಿ ಅವರ ಪುತ್ರ ದೀಪ ರಾಜ್, ಹರೀಶ್- ರಾಜೇಶ್ವರಿ ದಂಪತಿಯ ಸುಪುತ್ರಿಯರಾದ ಶ್ರೇಯ ಹಾಗೂ ಶ್ರಾವ್ಯ ಅವರನ್ನು ಗಣ್ಯರ ಸಮಕ್ಷಮದಲ್ಲಿ ತಂತ್ರಿವರ್ಯರು ಗೌರವಿಸಿ ಅಭಿನಂದಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಯಾದವ ಬಡಾಜೆ, ಹಿರಿಯ ಸದಸ್ಯರಾದ ಕರುಣಾಕರ ಮುಂಬೈ ಹಾಗೂ ಕೇಶವ ದುಬೈ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕಲ್ಲಗದ್ದೆ ವಂದಿಸಿದರು. ಶೈಲೇಶ್ ಸ್ಫೂರ್ತಿನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಸಿಹಿತಿಂಡಿ ವಿತರಿಸಲಾಯಿತು.