ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದ ಪ್ರದೇಶದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆಯ ಮುಂದುವರಿದಿದ್ದು, ಸ್ಥಳದಲ್ಲಿ ಇಂದು ಮಧ್ಯಾಹ್ನ ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದೆ.
ಬೆಳಗ್ಗೆ ಎರಡು ಕಾರುಗಳು ಮತ್ತು ನಾಯಿಗಳ ಶವ ಸಿಕ್ಕಿತ್ತು. ಬಳಿಕ ಕಾರ್ಯಾಚರಣೆ ಮುಂದುವರಿಸಿದಾಗ ನಾರಾಯಣ ಆಚಾರ್ ಅವರ ಶವ ಸಿಕ್ಕಿದೆ. ಐದು ದಿನಗಳ ಬಳಿಕ ನಾರಾಯಣ ಆಚಾರ್ ಮೃತದೇಹ ಪತ್ತೆಯಾಗಿದೆ. 2 ದಿನಗಳ ಹಿಂದೆ ಆನಂದತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು.ಕಾರ್ಯಾಚರಣೆ ಸ್ಥಳದಲ್ಲಿ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತ ಕೂಡ ಹಾಜರಿದ್ದು, ಮನೆಯಲ್ಲಿ ದೊರೆತ ವಸ್ತುಗಳನ್ನು ಅವರ ಸಮ್ಮುಖದಲ್ಲಿ ಮಹಜರು ಮಾಡಿ ಠಾಣೆಗೆ ಕೊಂಡೊಯ್ಯಲಾಗಿದೆ.
ಸಚಿವ ವಿ. ಸೋಮಣ್ಣ ,ಶಾಸಕ ಕೆ ಜಿ ಬೋಪಯ್ಯ ,ಸಂಸದ ಪ್ರತಾಪ್ ಸಿಂಹ ,ಶಾಸಕ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ಅವರಿಂದ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಮಳೆ ಮತ್ತು ದಟ್ಟ ಮಂಜಿನ ನಡುವೆಯೂ ಮೂರುದಿನಗಳಿಂದ ಕಾರ್ಯಾಚರಣೆ ಮುಂದುವರಿದಿದೆ. ಆಗಸ್ಟ್ 5ರಂದು ತಡರಾತ್ರಿ ಭಾರೀ ಮಳೆಗೆ ಬ್ರಹ್ಮಗಿರಿ ಬೆಟ್ಟ ಭಾರೀ ಪ್ರಮಾಣದಲ್ಲಿ ಕುಸಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ಐವರು ಜೀವಂತ ಸಮಾಧಿಯಾಗಿದ್ದರು. ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತಾ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ್ ಅವರು ದುರಂತದಲ್ಲಿ ಕಾಣೆಯಾಗಿದ್ದರು.
ಅರ್ಚಕ ನಾರಾಯಣ ಆಚಾರ್ಯರ ಮಕ್ಕಳು ಮೊನ್ನೆ ವಿದೇಶಗಳಿಂದ ಆಗಮಿಸಿದ್ದಾರೆ. ಮೂರು ಹಿಟಾಚಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮೂಲಕ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಾರಾಯಣ ಆಚಾರ್ಯರ ಮನೆಯ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಮಣ್ಣಿನಡಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹೆಚ್ಚು ಹಸುಗಳಿತ್ತು. ಅವೆಲ್ಲವೂ ಗುಡ್ಡ ಕುಸಿತದ ವೇಳೆ ಕೊಚ್ಚಿ ಹೋಗಿವೆ. ಕೊಡಗಿನ ಸುತ್ತಮುತ್ತ ನಾರಾಯಣ ಆಚಾರ್ಯ 100 ಎಕರೆ ಕಾಫಿ ತೋಟ ಹೊಂದಿದ್ದರು. ಅದೇ ರೀತಿ ಬೆಂಗಳೂರು, ಮಂಗಳೂರಿನಲ್ಲಿಯೂ ಆಸ್ತಿ ಹೊಂದಿದ್ದರು ಎನ್ನಲಾಗಿದೆ.